ಗಾಂಧಿನಗರ:- ಚೀನಾದಲ್ಲಿ ಕಳೆದ ಸಾಕಷ್ಟು ದಿನಗಳಿಂದ ಆರ್ಭಟಿಸುತ್ತಿರುವ HMPV ವೈರಸ್ ಇದೀಗ ಭಾರತಕ್ಕೂ ಕಾಲಿಟಿದ್ದು, ಆತಂಕ ಸೃಷ್ಟಿ ಆಗಿದೆ. ಬೆಂಗಳೂರಿನಲ್ಲಿ ಎರಡು ಪ್ರಕರಣಗಳ ವರದಿಯಾದ ನಂತರ ಗುಜರಾತ್‌ನಲ್ಲಿ ಮೊದಲ ಹೆಚ್‌ಎಮ್‌ಪಿವಿ ಸೋಂಕು ವರದಿಯಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯವು ಕರ್ನಾಟಕದಲ್ಲಿ ಎರಡು ಹೆಚ್‌ಎಮ್‌ಪಿವಿ ಪ್ರಕರಣಗಳನ್ನು ದೃಢಪಡಿಸಿದ ಕೆಲವೇ ಗಂಟೆಗಳಲ್ಲಿ ಗುಜರಾತ್‌ನಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ. ಇದು ಗುಜರಾತಿನ ಮೊದಲ ಪ್ರಕರಣವಾಗಿದ್ದು, 2 ವರ್ಷದ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ. ರೋಗಿಯನ್ನು ಅಹಮದಾಬಾದ್‌ನ ಚಂದ್‌ಖೇಡಾ ಪ್ರದೇಶದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ಪತ್ತೆಯಾಗಿದ್ದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ದೃಢಪಡಿಸಿದೆ. 3 ತಿಂಗಳ ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ, 8 ತಿಂಗಳ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಕೆ ಕಾಣುತ್ತಿದೆ ಎನ್ನಲಾಗಿದೆ.