ಟಾಲಿವುಡ್ ಬ್ಯೂಟಿ ಸಮಂತಾ ಹಾಗೂ ನಟ ನಾಗಚೈತನ್ಯ ಹಲವು ವರ್ಷಗಳ ಕಾಲ ಪ್ರೀತಿಸಿ ಅದ್ದೂರಿಯಾಗಿ ಮದುವೆಯಾಗಿದ್ದರು. ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯದಂತೆ ಮದುವೆಯಾದ ಜೋಡಿ ಮದುವೆಯಾದ ನಾಲ್ಕೇ ನಾಲ್ಕು ವರ್ಷಕ್ಕೆ ಡಿವೋರ್ಸ್ ಪಡೆದು ದೂರ ದೂರವಾಗಿದ್ದಾರೆ. ಸದ್ಯ ನಾಗಚೈತನ್ಯ ನಟಿ ಶೋಭಿತಾ ಜೊತೆ ಎರಡನೇ ಮದುವೆಗೆ ಸಿದ್ದವಾಗಿದ್ದಾರೆ. ಇತ್ತ ನಟಿ ಸಮಂತಾ ಸಿನಿಮಾ ರಂಗದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಸದ್ಯ ಬಾಲಿವುಡ್ ಚಿತ್ರರಂಗದಲ್ಲೂ ನಟಿ ಮಿಂಚುತ್ತಿದ್ದಾರೆ.ಈ ಮಧ್ಯೆ ಡಿವೋರ್ಸ್ ಬಳಿಕ ತಾವು ಎದುರಿಸಿದ ಅವಮಾನಗಳ ಬಗ್ಗೆ ನಟಿ ಮಾತನಾಡಿದ್ದಾರೆ.
ಗಲಾಟ್ಟಾ ಇಂಡಿಯಾಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಸಮಂತಾ “ಡಿವೋರ್ಸ್ ಪಡೆದ ನಂತರ ನನಗೆ ʼಸೆಕೆಂಡ್ ಹ್ಯಾಂಡ್ʼ,ಯೂಸ್ಡ್ʼ ಎಂಬ ಹಣೆಪಟ್ಟಿಗಳನ್ನು ಕಟ್ಟಿದರು. ಈ ಸಮಾಜದಲ್ಲಿ ಹೆಣ್ಣು ಮಕ್ಕಳು ಹಲವಾರು ಸಮಸ್ಯೆಗಳನ್ನು ಎದುರಿಸಬೇಕು. ಈಗಲೂ ಲಿಂಗ ತಾರತಮ್ಯವಿದೆ. ಮೇಲ್ ಡಾಮಿನೇಟ್ ಎಂಬುದು ಭಾರತವನ್ನು ಆವರಿಸಿಕೊಂಡಿದೆ” ಎಂದಿದ್ದಾರೆ.
“ಒಬ್ಬ ಮಹಿಳೆ ಡಿವೋರ್ಸ್ ಪಡೆದ ನಂತರ ಸಾಕಷ್ಟು ಕಳಂಕ ಮತ್ತು ಅವಮಾನಗಳನ್ನು ಎದುರಿಸಬೇಕಾಗುತ್ತದೆ. ಸೋಶಿಯಲ್ ಮೀಡಿಯಾಗಳಲ್ಲಿ ʼಸೆಕೆಂಡ್ ಹ್ಯಾಂಡ್ʼ,ʼಯೂಸ್ಡ್ʼ ಎನ್ನುವ ರೀತಿಯಲ್ಲಿ ಕಾಮೆಂಟ್ಸ್ ಗಳು ಹರಿದಾಡಿದವು. ಅಷ್ಟೇ ಅಲ್ಲದೆ, ಈಗಾಗಲೇ ಒಂದು ಮದುವೆಯಾಗಿರುವ ನಿಮಲ್ಲಿ ತಪ್ಪಿತಸ್ಥ ಭಾವ ಇರಬೇಕು. ನಿಮಗೆ ನಾಚಿಕೆ ಆಗಬೇಕು. ನಿಮ್ಮ ಜೀವನ ಇನ್ನು ವ್ಯರ್ಥ, ಈಗ ನೀವು ಮೂಲೆ ಗುಂಪಾಗಿದ್ದೀರಿ ಎಂಬಂಥ ಮಾತುಗಳು ಕೇಳಿ ಬಂದವು. ಇಂಥ ಸಂದರ್ಭಗಳಲ್ಲಿ ಹುಡುಗಿಯರು ಮತ್ತು ಅವರ ಕುಟುಂಬಗಳಿಗೆ ಕಷ್ಟವಾಗುತ್ತದೆ” ಎಂದು ನಟಿ ಹೇಳಿದ್ದಾರೆ.
“ಕೆಲ ದಿನಗಳ ಹಿಂದೆಯಷ್ಟೇ ನಾನು ವೈಟ್ ಗೌನ್ ಒಂದನ್ನು ಧರಿಸಿ ಈವೆಂಟ್ ನಲ್ಲಿ ಪಾಲ್ಗೊಂಡಿದ್ದೆ. ಆ ಸುದ್ದಿ ಸಾಕಷ್ಟು ವೈರಲ್ ಆಯಿತು. ಹಲವರು ಬಾಯಿಗೆ ಬಂದಹಾಗೆ ಮಾತನಾಡಿದರು. ನಾನು ಉದ್ದೇಶಪೂರ್ವಕವಾಗಿ ಆ ಉಡುಪನ್ನು ತೀರಾ ಇಷ್ಟಪಟ್ಟು ಧರಿಸಿದ್ದೆ. ಆದರೆ ಅದಕ್ಕೆ ಬಂದ ಕಾಮೆಂಟ್ ಗಳು ನನಗೆ ನೋವನ್ನು ಉಂಟು ಮಾಡಿದವು. ನಾನು ವೈವಾಹಿಕ ಬದುಕಿನಿಂದ ದೂರ ಉಳಿದಿದ್ದೇನೆ. ಡಿವೋರ್ಸ್ ಕೂಡ ಪಡೆದಿದ್ದೇನೆ ನಿಜ. ಹಾಗಂದ ಮಾತ್ರಕ್ಕೆ ನಾನು ಯಾವುದೋ ಮೂಲೆಯಲ್ಲಿ ಕೂತು ಅಳುತ್ತಿದ್ದೇನೆ ಎಂದಲ್ಲ. ಹೊಸ ಬದುಕಿಗೆ ಮತ್ತೆ ನನ್ನನ್ನು ನಾನು ತೆರೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ” ಎಂದಿದ್ದಾರೆ.
“ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ ಇದು ಯಾವ ಪ್ರತೀಕಾರವೂ ಅಲ್ಲ. ನಾನು ಯಾವ ವಿಷಯವನ್ನೂ ಮರೆಮಾಚಲು ಪ್ರಯತ್ನಿಸುವುದಿಲ್ಲ. ಏನು ನಡೆಯಬೇಕಿತ್ತೋ ಅದು ನಡೆದಿದೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲ. ನನ್ನ ಬದುಕು ಅಲ್ಲಿಗೆ ಮುಗಿಯುವುದಿಲ್ಲ. ಎಲ್ಲಿ ನನ್ನ ಬದುಕು ಕೊನೆಗೊಂಡಿತೋ ಅಲ್ಲಿಂದಲೇ ಮತ್ತೆ ಆರಂಭಗೊಳ್ಳಲಿದೆ. ನಾನು ಈ ಕ್ಷಣಕ್ಕೆ ತುಂಬಾ ಆರಾಮವಾಗಿ, ಸಂತೋಷವಾಗಿಯೂ ಇದ್ದೇನೆ. ಈಗ ನಾನು ತುಂಬಾ ಬೆಳೆದಿದ್ದೇನೆ. ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದೇನೆ. ಅದ್ಭುತ ವ್ಯಕ್ತಿಗಳು ನನ್ನೊಂದಿಗಿದ್ದಾರೆ. ನನ್ನ ಜೀವನದ ಮುಂದಿನ ಹಂತವನ್ನು ನಾನು ಎದುರು ನೋಡುತ್ತಿದ್ದೇನೆ” ಎಂದು ಸಮಂತಾ ಭರವಸೆಯ ಮಾತನಾಡಿದ್ದಾರೆ.



