ಚಿತ್ರರಂಗದಲ್ಲಿ ತಮಗಾದ ಕೆಟ್ಟ ಅನುಭವಗಳ ಬಗ್ಗೆ ನಟಿಯರು ಆಗಾಗ ಪ್ರತಿಕ್ರಿಯೆ ನೀಡುತ್ತಲೆ ಇರುತ್ತಾರೆ. ಇದೀಗ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಸೊನಾಲಿ ಬೇಂದ್ರೆ ಕನ್ನಡ ಚಿತ್ರರಂಗದಲ್ಲಿ ತಮಗಾದ ಕಹಿ ಘಟನೆಯನ್ನು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಅಮೆಜಾನ್ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ಸೊನಾಲಿ ಬೇಂದ್ರೆ, ಕನ್ನಡ ಚಿತ್ರರಂಗದಲ್ಲಿ ತಮಗೆ ಕಹಿ ಅನುಭವ ಆಗಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ‘ನಾನು ಕೆಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅದರ ನಡುವೆ ಒಂದು ಕನ್ನಡ ಸಿನಿಮಾದಲ್ಲಿ ನಾನು ನಟಿಸಿದ್ದೆ. ಆದರೆ ನನಗೆ ಆ ಸಿನಿಮಾದಲ್ಲಿ ಬಹಳ ಕೆಟ್ಟ ಅನುಭವ ಆಯ್ತು. ಇನ್ನೆಂದೂ ಕನ್ನಡ ಸಿನಿಮಾನಲ್ಲಿ ನಟಿಸುವುದಿಲ್ಲ ಎಂಬ ನಿರ್ಧಾರ ಮಾಡಿದೆ. ಆ ನಂತರ ಎಂದೂ ನಾನು ಕನ್ನಡ ಸಿನಿಮಾನಲ್ಲಿ ನಟಿಸಲಿಲ್ಲ’ ಎಂದಿದ್ದಾರೆ.
ಸೊನಾಲಿ ಬೇಂದ್ರೆ ಕನ್ನಡದ ‘ಪ್ರೀತ್ಸೆ’ ಸಿನಿಮಾನಲ್ಲಿ ನಟಿಸಿದ್ದರು. ಚಿತ್ರದಲ್ಲಿ ಶಿವರಾಜ್ ಕುಮಾರ್ ನಾಯಕ, ಉಪೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ನಟಿಸುವಾಗ ಸೊನಾಲಿ ಬೇಂದ್ರೆಗೆ ಕೆಟ್ಟ ಅನುಭವ ಆಗಿತ್ತಂತೆ. ಹಾಗಾಗಿ ಅವರು ಮತ್ತೆಂದೂ ಸಹ ಕನ್ನಡ ಸಿನಿಮಾಗಳಲ್ಲಿ ನಟಿಸಲಿಲ್ಲವಂತೆ. ಆದರೆ ತಮಗೆ ಆದ ಕಹಿ ಅನುಭವ ಏನು ಎಂಬುದನ್ನು ಸೊನಾಲಿ ಬೇಂದ್ರೆ ತಿಳಿಸಿಲ್ಲ.