ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಗುವ ಸಿನಿಮಾ ಹಾಗೂ ವೆಬ್‌ಸರಣಿಗಳಿಗೆ ಸೆನ್ಸಾರ್ ಕಡ್ಡಾಯ ಮಾಡಬೇಕು ಎಂಬ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಷ್ಟ ವಿರಾಮ ಹಾಕಿದೆ. ನೆಟ್ಫ್ಲಿಕ್ಸ್, ಅಮೇಜಾನ್ ಪ್ರೈಮ್ ವಿಡಿಯೋ, ಹಾಟ್‌ಸ್ಟಾರ್ ಸೇರಿದಂತೆ ಇತರೆ ಒಟಿಟಿ ವೇದಿಕೆಗಳ ಕಂಟೆಂಟ್‌ಗಳಿಗೆ ಸೆನ್ಸಾರ್ ಅವಶ್ಯಕತೆ ಇಲ್ಲ ಎಂದು ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.
ಮಕ್ಕಳು ಸುಲಭವಾಗಿ ಒಟಿಟಿ ವೀಕ್ಷಿಸುವ ಪರಿಸ್ಥಿತಿಯಲ್ಲಿ ಸೆನ್ಸಾರ್ ಇಲ್ಲದ ವಿಷಯಗಳು ಸಮಸ್ಯೆ ಉಂಟುಮಾಡಬಹುದು ಎಂಬ ಆತಂಕಗಳ ನಡುವೆ, ಕೇಂದ್ರ ಸರ್ಕಾರ ಮಾಹಿತಿ ತಂತ್ರಜ್ಞಾನ ನಿಯಮಗಳ ಜಾರಿಗೆ ಒತ್ತು ನೀಡಿದೆ. 2021ರ ಐಟಿ ನಿಯಮಗಳ ಅಡಿಯಲ್ಲಿ ವಯೋಮಾನದ ಆಧಾರದಲ್ಲಿ ವಿಷಯ ವರ್ಗೀಕರಣ ಕಡ್ಡಾಯವಾಗಿದ್ದು, ಅದೇ ಸಾಕ್ಷ್ಯಕರ ನಿಯಂತ್ರಣ ಎಂದು ತಿಳಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಹಾಯಕ ಸಚಿವ ಎಲ್. ಮುರುಗನ್, ಅಶ್ಲೀಲ ಕಂಟೆಂಟ್ ಹರಡುತ್ತಿದ್ದ 43 ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಈಗಾಗಲೇ ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಒಟಿಟಿಗೆ ಸೆನ್ಸಾರ್ ಪ್ರಕ್ರಿಯೆ ಜಾರಿಯಾದರೆ, ದೃಶ್ಯಗಳು ಮತ್ತು ಸಂಭಾಷಣೆಗಳಿಗೆ ಕತ್ತರಿ ಬೀಳುವ ಸಾಧ್ಯತೆ ಇದ್ದು, ವೀಕ್ಷಕರ ಆಯ್ಕೆಗೆ ಮಿತಿ ಉಂಟಾಗುತ್ತಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಇದೇ ವೇಳೆ, ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲತೆ ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ಮಾನದಂಡಗಳನ್ನು ಜಾರಿ ಮಾಡಿದೆ. 50 ಲಕ್ಷಕ್ಕಿಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಸಂಸ್ಥೆಗಳು ಸ್ಥಳೀಯ ಅಧಿಕಾರಿಗಳನ್ನು ನೇಮಿಸಬೇಕು. ದೂರು ಬಂದ 72 ಗಂಟೆಗಳೊಳಗೆ ಕಾನೂನುಬಾಹಿರ ವಿಷಯಗಳನ್ನು ತೆಗೆದುಹಾಕುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಸೂಚಿಸಿದೆ.



