ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಹಿಂಗಾರು ಹಂಗಾಮಿನಲ್ಲಿ ಕಡಲೆ ಬೆಳೆ ಬೆಳೆದ ರೈತರ ಜಮೀನುಗಳಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗದಗ ಕೃಷಿ ಇಲಾಖೆ ಉಪ ನಿರ್ದೇಶಕರಾದ ಸ್ಪೂರ್ತಿ ಜಿ.ಎಸ್ ಅವರು ರೈತರೊಂದಿಗೆ ಮಾತನಾಡಿ, ಬಿತ್ತನೆಗೆ ಮೊದಲು ಸರಿಯಾಗಿ ಬೀಜೋಪಚಾರ ಮಾಡುವುದರಿಂದ ಬೀಜಗಳಿಂದ ಹಾಗೂ ಮಣ್ಣಿನಿಂದ ಬರುವ ರೋಗಗಳನ್ನು ತಡೆಗಟ್ಟಲು ಸಾಧ್ಯ. ಕಡಲೆ ಬೆಳೆಯಲ್ಲಿ ಸಿಡಿ ರೋಗ ನಿಯಂತ್ರಣಕ್ಕೆ ಟ್ರೈಕೋಡರ್ಮ ಬೀಜೋಪಚಾರ ಮಾಡುವುದರಿಂದ ನಿಯಂತ್ರಣ ಸಾಧ್ಯವಾಗುತ್ತದೆ. ಕೃಷಿ ಇಲಾಖೆಯಿಂದ ಈ ವರ್ಷ ರಿಯಾಯಿತಿ ದರದಲ್ಲಿ ಕೊಡಮಾಡಿದ ಬಿಜಿಡಿ 111-1 ಸುಧಾರಿತ ತಳಿಯಾಗಿದ್ದು, ಹೆಚ್ಚು ಇಳುವರಿ ಹಾಗೂ ರೋಗನಿರೋಧಕ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು.
ಕೃಷಿ ವಿಜ್ಞಾನಿ ಡಾ. ಕಲಾವತಿ ಕಾಂಬಳೆ ಮಾತನಾಡಿ, ರೈತರು ವರ್ಷದಿಂದ ವರ್ಷಕ್ಕೆ ಪರ್ಯಾಯ ಬೆಳೆಯನ್ನು ಬೆಳೆಯುವುದರಿಂದ ರೋಗಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಕಡಲೆ ಬಿತ್ತನೆ ಜೊತೆಗೆ ಮಿಶ್ರ ಬೆಳೆಯಾಗಿ ಜೋಳವನ್ನು ಸೇರಿಸಿ ಬಿತ್ತಿದರೆ ಪಕ್ಷಿಗಳನ್ನು ಆಕರ್ಷಿಸಿ ಕೀಟಗಳ ಹತೋಟಿಯನ್ನು ಮಾಡಲು ಸಹಾಯಕವಾಗುತ್ತದೆ. ಸಿಡಿ ರೋಗ ಕಂಡುಬಂದಂತೆ ಗಿಡಗಳನ್ನು ಕಿತ್ತು ಸುಟ್ಟು ಹಾಕುವುದರಿಂದ ರೋಗವನ್ನು ಹರಡದಂತೆ ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಳಿ ಶಾಸ್ತ್ರಜ್ಞ ಡಾ. ಮೋಳಗಿ, ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ, ಕೃಷಿ ಅಧಿಕಾರಿ ಬಸವ ರಾಜೇಶ್ವರಿ ಸಜ್ಜನರ, ರಮೇಶ ಜತ್ತಿ, ಹಾಗೂ ರೈತರಾದ ಶರಣಪ್ಪ ಜೋಗಿನ, ಹಾಲ್ಲಪ್ಪ ಗದಗ, ಹುಚ್ಚೀರಪ್ಪ ಜೋಗಿನ, ಶ್ರೀಕಾಂತ ಗುಡ್ಲಾನೂರು, ಮಾರುತಿ ಜೋಗಿನ, ಗಿರೀಶ್ ಗುಡ್ಲಾನೂರು ಮುಂತಾದ ರೈತರು ಪಾಲ್ಗೊಂಡಿದ್ದರು.



