ವಿಜಯಸಾಕ್ಷಿ ಸುದ್ದಿ, ಗದಗ : ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ತಪ್ಪದೇ ವಿಮಾ ಕಂತು ಪಾವತಿಸುವ ಮೂಲಕ ಪ್ರಕೃತಿ ವಿಕೋಪದಿಂದಾಗುವ ಆರ್ಥಿಕ ಸಂಕಷ್ಟದಿಂದ ಪಾರಾಗಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರು ಬೆಳೆಯುವ ವಿವಿಧ ಬೆಳೆಗಳಿಗೆ ಪ್ರತ್ಯೇಕವಾಗಿ ವಿಮಾ ಕಂತುಗಳನ್ನು ನಿಗದಿಪಡಿಸಲಾಗಿದೆ. ಅದರಂತೆ ವಿಮಾ ಕಂತು ಪಾವತಿಸಲು ಬೆಳೆಗಳಿಗೆ ಅನುಸಾರ ಪ್ರತ್ಯೇಕವಾಗಿ ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದು, ರೈತರು ಕೊನೆಯ ದಿನಾಂಕದವರೆಗೂ ಕಾಯದೇ ಮುಂಚಿತವಾಗಿ ತಾವು ಬೆಳೆದ ಬೆಳೆಗೆ ವಿಮಾ ಕಂತು ಪಾವತಿಸುವಂತೆ ಸೂಚಿಸಿದರು.
ಮುಂಗಾರು ಹಂಗಾಮಿನ ಬೆಳೆಗಳಿಗೆ ರೈತರು ಆ್ಯಪ್ ಮೂಲಕ ಸಮೀಕ್ಷೆ ಕೈಗೊಳ್ಳಲು ಅವಕಾಶ ನೀಡಲಾಗಿದ್ದು,
ರೈತರು ತಾವು ಬೆಳೆದ ಬೆಳೆಗಳ ವಿವರಗಳನ್ನು ಗೂಗಲ್ ಪ್ಲೇಸ್ಟೋರ್‌ನಿಂದ ಮುಂಗಾರು ರೈತರ ಬೆಳೆ ಸಮೀಕ್ಷೆಯನ್ನು ಡೌನ್‌ಲೋಡ್ ಮಾಡಿಕೊಂಡು ಬೆಳೆ ವಿವರಗಳನ್ನು ದಾಖಲಿಸಬೇಕು. ಹೀಗೆ ವಿವರಗಳನ್ನು ದಾಖಲಿಸುವದರಿಂದ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ, ಬೆಳೆ ವಿಮೆ ಯೋಜನೆ, ಬರಗಾಲ ಮತ್ತು ಪ್ರವಾಹ ಸಂದರ್ಭದಲ್ಲಿ ನಷ್ಟ ಪರಿಹಾರ ಪಡೆಯಲು, ಪಹಣಿಯಲ್ಲಿ ಬೆಳೆ ವಿವರಗಳನ್ನು ದಾಖಲಿಸಲು ಮತ್ತು ಬೆಳೆಸಾಲ ಪಡೆಯುವಲ್ಲಿ ರೈತರಿಗೆ ಅನುಕೂಲವಾಗುತ್ತದೆ ಎಂದರು.

ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್. ಮಾತನಾಡಿ, ಜಿಲ್ಲೆಯಲ್ಲಿ ಜೂನ್ 28ಕ್ಕೆ ಕೊನೆಗೊಂಡಂತೆ 301548 ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ ಇದ್ದು ಆ ಪೈಕಿ 278239 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ರೈತರಿಗೆ ಈಗಾಗಲೇ 4915.46 ಕ್ವಿಂಟಲ್ ಬಿತ್ತನೆ ಬೀಜ ವಿತರಣೆಯಾಗಿದ್ದು, ಇನ್ನೂ 1524 ಕ್ವಿಂಟಲ್ ಬಿತ್ತನೆ ಬೀಜ ಲಭ್ಯವಿದೆ ಎಂದರು.
2024-25ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಬೆಳೆ ವಿಮಾ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಓರಿಯೆಂಟಲ್ ಇನ್ಸೂರನ್ಸ್ ಕಂಪನಿ ಲಿಮಿಟೆಡ್ ಇವರನ್ನು ಸರ್ಕಾರ ಆಯ್ಕೆ ಮಾಡಿದ್ದು, ರೈತರು ಬೆಳೆ ವಿಮೆಗೆ ಸಂಬಂಧಿಸಿದ ಮಾಹಿತಿಗಾಗಿ ಓರಿಯೆಂಟಲ್ ಇನ್ಸೂರನ್ಸ್ ಕಂಪನಿಯ ಪ್ರತಿನಿಧಿಗಳನ್ನು ಸಂಪರ್ಕಿಸಬಹುದಾಗಿದೆ ಎಂದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಶಿಕಾಂತ ಕೋಟಿಮನಿ ಮಾತನಾಡಿ, ನೀರಾವರಿ ಆಧಾರಿತ ಈರುಳ್ಳಿ ಹಾಗೂ ಕೆಂಪು ಮೆಣಸಿನಕಾಯಿ ಬೆಳೆಗಳಿಗೆ ರೈತರು ವಿಮೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31 ಆಗಿದ್ದು, ಮಳೆ ಆಶ್ರಿತ ಈರುಳ್ಳಿ ಹಾಗೂ ಕೆಂಪು ಮೆಣಸಿನಕಾಯಿ ಬೆಳೆಗಳಿಗೆ ವಿಮೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 16 ಕೊನೆಯ ದಿನವಾಗಿದೆ. ರೈತರು ನೋಂದಣಿಗಾಗಿ ಕಡ್ಡಾಯವಾಗಿ ಫ್ರೂಟ್ಸ್ ಐಡಿ ಹೊಂದಿರಬೇಕು ಎಂದರು.
ಸಭೆಯಲ್ಲಿ ಗ್ರಾ.ಪಂ ವ್ಯಾಪ್ತಿಯ ಪ್ರದೇಶಗಳಲ್ಲಿ ಮಳೆ ಮಾಪನ ಯಂತ್ರ ಅಳವಡಿಕೆ, ಜಿಲ್ಲೆಯಲ್ಲಿ ಕುಸುಬೆ ಬೆಳೆಯ ಬೆಂಬಲ ಬೆಲೆಯ ಕೇಂದ್ರ ನಿರ್ಮಾಣ, ರೈತರ ಆತ್ಮಹತ್ಯೆ ಪ್ರಕರಣಗಳು, ಆಕಸ್ಮಿಕ ಮರಣಗಳ ಪ್ರಕರಣಗಳು, ಬೆಂಕಿ ಬಣವೆ ಪ್ರಕರಣಗಳು ಸೇರಿದಂತೆ ಕೃಷಿ ಇಲಾಖೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಜಿಲ್ಲಾ ಸಂಖ್ಯಾಸಂಗ್ರಹಣಾಧಿಕಾರಿ ಎ.ಎ. ಕಂಬಾಳಿಮಠ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ತಾಲೂಕಾ ಅಧಿಕಾರಿಗಳು, ವಿವಿಧ ರೈತ ಸಮುದಾಯದ ಮುಖಂಡರು, ರೈತರು, ಇನ್ಸುರನ್ಸ್ ಕಂಪನಿಯ ಪ್ರತಿನಿಧಿಗಳು, ರಸಗೊಬ್ಬರದ ಅಂಗಡಿ ಮಾಲೀಕರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಇನ್ಸೂರನ್ಸ್ ಕಂಪನಿಯ ಪ್ರತಿನಿಧಿಗಳ ವಿವರ
ಜಿಲ್ಲಾ ಪ್ರತಿನಿಧಿ-ಮುತ್ತಣ್ಣ ಕಂಡಕಿ ಮೊ:8310428945, 9845928186; ಗದಗ ತಾಲೂಕು-ನಾಗರಾಜ ಕುರ್ತಕೋಟಿ ಮೊ:7892387655; ಗಜೇಂದ್ರಗಡ ತಾಲೂಕು-ಫಕೀರಸಾಬ ಆರ್.ಗುರಿಕಾರ -ಮೊ: 9164098169; ಲಕ್ಷ್ಮೇಶ್ವರ ತಾಲೂಕು-ಮಹಾಂತೇಶ ಎಸ್. ಪ್ರಭಯ್ಯನವರವ್ಮಠ ಮೊ: 8618234981, ಮುಂಡರಗಿ ತಾಲೂಕು-ವಿಠ್ಠಲ ಮರಡಿ ಮೊ: 9060604403; ನರಗುಂದ ತಾಲೂಕು -ಕರಿಯಪ್ಪ ಹಿರೇಕುರುಬರ ಮೊ: 9742603652; ರೋಣ ತಾಲೂಕು -ಮಂಜುನಾಥ ಚಟ್ಟಿ ಮೊ: 9611317070; ಶಿರಹಟ್ಟಿ ತಾಲೂಕು -ನಿಂಗಪ್ಪ ಎಲ್.ಲಮಾಣಿ ಮೊ: 9880611390.
ಜಿಲ್ಲೆಯ ಪ್ರತಿಯೊಂದು ಬೀಜ ಹಾಗೂ ರಸಗೊಬ್ಬರಗಳ ಅಂಗಡಿಗಳಲ್ಲಿ ಲಭ್ಯವಿರುವ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ದರ ಹಾಗೂ ಪ್ರಮಾಣಗಳನ್ನು ಕಡ್ಡಾಯವಾಗಿ ಪ್ರಕಟಿಸಬೇಕು. ರೈತರುಗಳು ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಖರೀದಿಸಿದ ನಂತರ ತಪ್ಪದೇ ಸಂಬಂಧಿತ ಅಂಗಡಿಗಳಿಂದ ರಸೀದಿಯನ್ನು ಪಡೆದುಕೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ ನಿರ್ಲಕ್ಷ್ಯ ತೋರಬಾರದು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.


