ವಿಜಯಸಾಕ್ಷಿ ಸುದ್ದಿ, ಗದಗ: 18ನೇ ಶತಮಾನದಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿವೃದ್ಧಿ ಕಾರ್ಯಗಳನ್ನ ಕೈಗೊಂಡ ಮರಾಠಾ ಸಾಮ್ರಾಜ್ಯದ ರಾಣಿ ಅಹಿಲ್ಯಾಬಾಯಿ ಹೋಳ್ಕರ್ ಅವರು ಲೋಕ ಕಲ್ಯಾಣದ ಪ್ರೇರಣಾ ಶಕ್ತಿಯಾಗಿದ್ದಾರೆ ಎಂದು ಮಾಜಿ ಸಚಿವ ಕಳಕಪ್ಪ ಜಿ.ಬಂಡಿ ಹೇಳಿದರು.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ನಡೆದ ಅಹಿಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇವಾಲಯಗಳ ನಿರ್ಮಾಣ, ಧರ್ಮ ಛತ್ರಗಳು, ವಿಶ್ವವಿದ್ಯಾಲಯಗಳು, ಆಸ್ಪತ್ರೆಗಳು, ಮಹಿಳಾ ಸುಧಾರಣೆ ಮತ್ತು ದಾನ ದತ್ತಿಗಳ ಮೂಲಕ ಇಡೀ ಭಾರತದಾದ್ಯಂತ ಉತ್ತಮ ಆಡಳಿತ ಹಾಗೂ ಸಾಮಾಜಿಕ ನ್ಯಾಯದಾನದಲ್ಲಿ ಅವರು ಹೆಸರುವಾಸಿಯಾಗಿದ್ದರು. ರಾಣಿ ಅಹಿಲ್ಯಾಬಾಯಿ ಹೋಳ್ಕರ್ ಅವರ ಜನಪರ ನೀತಿ, ನಡೆ-ನುಡಿ, ಆಚಾರ-ವಿಚಾರಗಳನ್ನು ನಾವೆಲ್ಲರೂ ಅನುಸರಿಸೋಣ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ರವಿ ದಂಡಿನ, ರಾಜೇಶ್ವರಿ ಸಾಲಗಟ್ಟಿ, ಜಿಲ್ಲಾ ಸಂಚಾಲಕ ಆರ್.ಕೆ. ಚವ್ಹಾಣ್, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನಿರ್ಮಲಾ ಕೊಳ್ಳಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಮಲಾಕ್ಷಿ ಗೊಂದಿ, ಕಸ್ತೂರಿ ಕಮ್ಮಾರ್, ಅಶ್ವಿನಿ ಜಗತಾಪ, ವಿಜಯಲಕ್ಷ್ಮೀ ಮಾನ್ವಿ, ಕವಿತಾ ಬಂಗಾರಿ, ಕಮಲಾಕ್ಷಿ ಅಂಗಡಿ, ಜ್ಯೋತಿ ಹಾನಗಲ್, ಅರುಣ ಪಾಟೀಲ, ನಂದಾ ಪಲ್ಲೇದ ಉಪಸ್ಥಿತರಿದ್ದರು. ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವಿನಿ ಆಂಕಲಕೋಟಿ ಕಾರ್ಯಕ್ರಮ ನಿರೂಪಿಸಿದರು, ಸ್ವಾತಿ ಅಕ್ಕಿ ವಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಕರುಣೆ, ಮಮತೆಗೆ ಹೆಸರಾದ ತಾಯಂದಿರು ಮನಸು ಮಾಡಿದರೆ ನಾಡನ್ನು ಆಳುತ್ತಾರೆ ಎಂಬುದಕ್ಕೆ ರಾಜಮಾತೆ ಅಹಿಲ್ಯಾಬಾಯಿ ನಿದರ್ಶನ. ಆಡಳಿತದಲ್ಲಿನ ಜಾಣ್ಮೆ, ಕೌಶಲ್ಯ, ಅಭಿವೃದ್ಧಿ ಕೆಲಸಗಳಲ್ಲಿನ ಶ್ರದ್ಧೆ, ಶ್ರಮ ಅವರನ್ನು 3 ದಶಕಗಳ ಕಾಲ ಸುಭದ್ರ ಆಳ್ವಿಕೆ ನೀಡುವಂತೆ ಮಾಡಿತು. ಇವತ್ತಿನ ಮಹಿಳೆಯರು ಕೂಡಾ ಎಂತಹ ಅಡೆತಡೆಗಳು ಬಂದರೂ ಅಂಜದೆ ಅಳುಕದೆ ಮುನ್ನುಗಬೇಕು. ಅಂದಾಗ ಯಶಸ್ಸು ನಿಮ್ಮನ್ನ ಹಿಂಬಾಲಿಸುತ್ತದೆ ಎಂದರು.



