ಬೆಂಗಳೂರು:- ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಳ್ಳುವ ಎಐ ನಿರ್ಮಿತ ನಕಲಿ ವಿಡಿಯೋ ಪೋಸ್ಟ್ ಮಾಡಿದ್ದ ಇನ್‌ಸ್ಟಾಗ್ರಾಮ್ ಖಾತೆಯೊಂದರ ಮೇಲೆ ಕೇಸ್ ದಾಖಲಾಗಿದೆ.
ಗಲಭೆ ಪ್ರಚೋದನೆ ಮತ್ತು ಸಾರ್ವಜನಿಕ ಅಶಾಂತಿ ಉಂಟುಮಾಡಿದ ಆರೋಪದಡಿ ‘ಕನ್ನಡ ಚಿತ್ರರಂಗ’ ಇನ್‌ಸ್ಟಾಗ್ರಾಮ್ ಖಾತೆಯ ಬಳಕೆದಾರರ ವಿರುದ್ಧ ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಭೆಯೊಂದರಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಳ್ಳುತ್ತಾರೆ. ಈ ವೇಳೆ ಮುಖ್ಯಮಂತ್ರಿಗಳು ಕುರ್ಚಿಯಿಂದ ಬೀಳುವ ದೃಶ್ಯ ಪೋಸ್ಟ್ ಮಾಡಲಾದ ವಿಡಿಯೋದಲ್ಲಿದೆ. ಇದರ ಜೊತೆಗೆ ಡಿಕೆಶಿ ಅವರು ಇಂತಹ ಕೆಲಸ ಮಾಡಬಾರದಿತ್ತು ಎಂಬ ಶೀರ್ಷಿಕೆಯನ್ನೂ ವಿಡಿಯೋದಲ್ಲಿ ಹಾಕಲಾಗಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಡಿಸಿಎಂ ಮತ್ತು ಸಿಎಂ ಬೆಂಬಲಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ವಿಡಿಯೋ ಮೂಲಕ ಡಿ.ಕೆ. ಶಿವಕುಮಾರ್ ಅವರ ವ್ಯಕ್ತಿತ್ವವನ್ನು ಹಾನಿಗೊಳಿಸುವ ಉದ್ದೇಶವಿದೆ. ಸಮಾಜದಲ್ಲಿ ಸುಳ್ಳು ಮಾಹಿತಿ ಹಬ್ಬಿಸುವ ಮೂಲಕ ಮಾನ್ಯ ಮುಖ್ಯಮಂತ್ರಿಗಳ ಮತ್ತು ಉಪಮುಖ್ಯಮಂತ್ರಿಗಳ ಗೌರವವನ್ನು ಕುಗ್ಗಿಸುವುದಲ್ಲದೆ, ಸರ್ಕಾರವನ್ನು ಅವಮಾನಗೊಳಿಸಲೆಂದೇ ಸೃಷ್ಟಿಸಲಾಗಿದೆ. ಇದರಿಂದಾಗಿ ಸಮಾಜದಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆಯಿದೆ ಎಂದು ದೂರುದಾರರು ಆರೋಪಿಸಿದ್ದಾರೆ.


