HomeArt and Literatureಶೇ. 100ರಷ್ಟು ಗುಣಾತ್ಮಕ ಫಲಿತಾಂಶದ ಗುರಿ

ಶೇ. 100ರಷ್ಟು ಗುಣಾತ್ಮಕ ಫಲಿತಾಂಶದ ಗುರಿ

For Dai;y Updates Join Our whatsapp Group

Spread the love

ಗದಗ ಜಿಲ್ಲೆಯಲ್ಲಿ ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಶಾಲಾ ಶಿಕ್ಷಣ ಇಲಾಖೆ ಮುಂಚಿತ ಹಾಗೂ ಸಮಗ್ರ ಯೋಜನೆಯೊಂದಿಗೆ ಸಜ್ಜಾಗಿದ್ದು, ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದ ಮೂಲಕ ಶೇ. 100ರಷ್ಟು ಗುಣಾತ್ಮಕ ಫಲಿತಾಂಶ ಸಾಧಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರ ದೃಷ್ಟಿಯಲ್ಲಿ ವಿದ್ಯಾರ್ಥಿಯೇ ಶಿಕ್ಷಣದ ಕೇಂದ್ರಬಿಂದುವಾಗಿದ್ದು, ಅದಕ್ಕೆ ತಕ್ಕಂತೆ ಈ ವರ್ಷದ ಪರೀಕ್ಷಾ ತಯಾರಿಯನ್ನು ರೂಪಿಸಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಗುರುತಿಸಿ ನಿಧಾನ ಕಲಿಕೆ, ಸರಾಸರಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಭಿನ್ನ ತಂತ್ರಗಳನ್ನು ಅಳವಡಿಸಿರುವುದು ಈ ತಯಾರಿಯ ಪ್ರಮುಖ ವೈಶಿಷ್ಟ್ಯವಾಗಿದೆ.

ಪೂರ್ವ ಸಿದ್ಧತಾ ಪರೀಕ್ಷೆಗಳು–1, 2 ಹಾಗೂ 3, ಇಲಾಖೆಯಿಂದ ಗುರುತಿಸಲಾದ ನಾಲ್ಕು ಮಾದರಿಯ ಪ್ರಶ್ನೆ ಪತ್ರಿಕೆಗಳು, 29 ಅಂಶಗಳ ಅನುಷ್ಠಾನ, ನಿರಂತರ ಮೌಲ್ಯಮಾಪನ, ಫೋನ್–ಇನ್ ಕಾರ್ಯಕ್ರಮಗಳು, ವಿಷಯವಾರು ಮಾರ್ಗದರ್ಶನ ಹಾಗೂ ಶಿಕ್ಷಕರ ಶೈಕ್ಷಣಿಕ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳು ಪರೀಕ್ಷಾ ತಯಾರಿಯನ್ನು ಇನ್ನಷ್ಟು ಗಟ್ಟಿಗೊಳಿಸಿವೆ.

ಶಿಕ್ಷಕರು, ಮುಖ್ಯ ಶಿಕ್ಷಕರು, ಶಿಕ್ಷಣಾಧಿಕಾರಿಗಳು, ಡಯಟ್ ಉಪನ್ಯಾಸಕರು, ಬಿಆರ್‌ಪಿ–ಸಿಆರ್‌ಪಿ, ಎಸ್‌ಡಿಎಂಸಿ ಹಾಗೂ ಪಾಲಕರ ಸಮನ್ವಯದೊಂದಿಗೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು ಮತ್ತು ಅಧ್ಯಯನಾಸಕ್ತಿ ಬೆಳೆಸುವ ಪ್ರಯತ್ನಗಳು ಯಶಸ್ವಿಯಾಗಿ ಸಾಗುತ್ತಿವೆ. `ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕುಳಿತಂತ ಎಲ್ಲಾ ಅಭ್ಯರ್ಥಿಗಳು ಶೇ. 100ರಷ್ಟು ಗುಣಾತ್ಮಕ ಫಲಿತಾಂಶ ಗುರಿ ಹೊಂದಲಿ’ ಎಂಬ ಧ್ಯೇಯದೊಂದಿಗೆ ಕೈಗೊಂಡ ಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ.

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆಗಳು ಬೂಸ್ಟರ್ ಪರೀಕ್ಷೆಗಳಂತೆ ಕಾರ್ಯನಿರ್ವಹಿಸುತ್ತಿವೆ. ಮೊದಲ ಬಾರಿಗೆ ವಾರ್ಷಿಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ಉದ್ದೇಶದಿಂದ ಈ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. 2025–26ನೇ ಸಾಲಿನಲ್ಲಿ ವಿದ್ಯಾರ್ಥಿಗಳು ಈಗಾಗಲೇ ಎರಡು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಮೂರನೇ ಪೂರ್ವ ಸಿದ್ಧತಾ ಪರೀಕ್ಷೆ ಫೆಬ್ರವರಿ 23ರಿಂದ 28ರವರೆಗೆ ನಡೆಯಲಿದೆ. ಈ ವರ್ಷ ವಿಷಯವಾರು ನೀಲನಕ್ಷೆ (ಬ್ಲೂಪ್ರಿಂಟ್) ನೀಡಿರುವುದು ಮತ್ತೊಂದು ವಿಶೇಷವಾಗಿದೆ.

ಯಾವ ಪಠ್ಯದಿಂದ ಎಷ್ಟು ಅಂಕಗಳಿಗೆ ಪ್ರಶ್ನೆಗಳು ಬರುತ್ತವೆ ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಿದ್ದು, ಅದರ ಆಧಾರದಲ್ಲಿ ಅಧ್ಯಯನ ಮಾಡಿದರೆ ವಾರ್ಷಿಕ ಪರೀಕ್ಷೆಗೆ ಉತ್ತಮ ಸಿದ್ಧತೆ ಸಾಧ್ಯವಾಗಲಿದೆ. ಹಳೆಯ ಹಾಗೂ ಮಾದರಿ ಪ್ರಶ್ನೆಪತ್ರಿಕೆಗಳ ಅಧ್ಯಯನವು ಪರೀಕ್ಷೆಯ ಮೇಲಿನ ಭಯವನ್ನು ಹೋಗಲಾಡಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಶಾಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಗಳ ಜೊತೆಗೆ ಸ್ವತಃ ಅಣುಕು ಪರೀಕ್ಷೆಗಳನ್ನು ತೆಗೆದುಕೊಳ್ಳುವುದು ಅತ್ಯಂತ ಉಪಯುಕ್ತವಾಗಿದೆ. ಅಣುಕು ಪರೀಕ್ಷೆಗಳ ಮೂಲಕ ಉತ್ತರ ಬರವಣಿಗೆಯ ಕೌಶಲ್ಯ, ಸಮಯ ನಿರ್ವಹಣೆ ಹಾಗೂ ಸ್ವಮೌಲ್ಯಮಾಪನಕ್ಕೆ ಅವಕಾಶ ದೊರೆಯುತ್ತದೆ.

ಇದೀಗ ಪರೀಕ್ಷೆಗೆ ಕಡಿಮೆ ಸಮಯ ಉಳಿದಿರುವುದರಿಂದ ವಿದ್ಯಾರ್ಥಿಗಳು ಇರುವ ಸಮಯವನ್ನು ಮೌಲ್ಯಯುತವಾಗಿ ಬಳಸಿಕೊಳ್ಳಬೇಕಿದೆ. ವಿಶೇಷವಾಗಿ ಕಷ್ಟ ಎನಿಸುವ ವಿಷಯಗಳಿಗೆ ಹೆಚ್ಚು ಒತ್ತು ನೀಡುವುದರಿಂದ ಒಟ್ಟಾರೆ ಫಲಿತಾಂಶವನ್ನು ಉತ್ತಮಗೊಳಿಸಬಹುದು.

ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆರ್.ಎಸ್. ಬುರುಡಿ ಹಾಗೂ ಡಯಟ್ ಪ್ರಾಂಶುಪಾಲ ಜಿ.ಎಂ. ಮುಂದಿನಮನಿ ಅವರ ಮಾರ್ಗದರ್ಶನದಲ್ಲಿ, ಜಿಲ್ಲೆಯ ಎಲ್ಲಾ ತಾಲೂಕುಗಳ ಶಿಕ್ಷಣಾಧಿಕಾರಿಗಳು, ಶಿಕ್ಷಣ ಸಂಯೋಜಕರು, ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಒಟ್ಟಾಗಿ ಶ್ರಮಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ 87ಕ್ಕೂ ಹೆಚ್ಚು ಓದುವ ಮನೆಗಳನ್ನು ನಿರ್ಮಿಸಿ ಸುಮಾರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ನಿಧಾನ ಕಲಿಕೆಯ ಮಕ್ಕಳಿಗೆ ವಿಶೇಷ ತರಗತಿಗಳನ್ನು ಆಯೋಜಿಸುವ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ಶ್ಲಾಘನೀಯವಾಗಿದೆ.

ಗುಣಾತ್ಮಕ ಫಲಿತಾಂಶದತ್ತ ಜಿಲ್ಲೆಯ ಶಾಲೆಗಳ ಸಶಕ್ತ ಹೆಜ್ಜೆ ಗುಣಾತ್ಮಕ ಶಿಕ್ಷಣ ಹಾಗೂ ಶೇ. 100ರಷ್ಟು ಫಲಿತಾಂಶ ಸಾಧನೆಯ ಗುರಿಯೊಂದಿಗೆ ಜಿಲ್ಲೆಯಲ್ಲಿ ‘ಚಿಕಿತ್ಸಕ ವಿಧಾನದ ಕಲಿಕೆ’ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಶಾಲಾ ಶಿಕ್ಷಣ ಇಲಾಖೆಯಿಂದ ಒದಗಿಸಲಾದ ವಿಷಯವಾರು ಟ್ರ‍್ಯಾಕಿಂಗ್ ಶೀಟ್‌ಗಳನ್ನು ಬಳಸಿಕೊಂಡು ಪ್ರತಿ ಮಗುವನ್ನು ಮಗುವಾರು ಕಾಳಜಿಯಿಂದ ಟ್ರ‍್ಯಾಕ್ ಮಾಡುವ ವ್ಯವಸ್ಥೆ ಜಾರಿಗೆ ಬಂದಿದೆ.

ಈ ವ್ಯವಸ್ಥೆಯಡಿ, ಪ್ರತಿ ಮಗುವು ಕಲಿಯದ ಅಂಶಗಳನ್ನು ಗುರುತಿಸಿ, ಅವುಗಳ ಕುರಿತು ಅಗತ್ಯವಿದ್ದಲ್ಲಿ ಓದಿಸುವುದು, ಬೋಧಿಸುವುದು ಹಾಗೂ ಬೋಧನೆಯ ನಂತರ ಚಿಕ್ಕ ಪರೀಕ್ಷೆಗಳ ಮೂಲಕ ಮೌಲ್ಯಮಾಪನ ಮಾಡಿ ತಕ್ಷಣವೇ ಹಿಮ್ಮಾಹಿತಿ ನೀಡಲಾಗುತ್ತಿದೆ. ಇದರಿಂದ ಮಕ್ಕಳ ಕಲಿಕಾ ಕೊರತೆಗಳನ್ನು ತಕ್ಷಣವೇ ಸರಿಪಡಿಸಲು ಸಾಧ್ಯವಾಗಿದ್ದು, ಕಲಿಕೆಯಲ್ಲಿ ಸ್ಪಷ್ಟವಾದ ಪ್ರಗತಿ ಕಂಡುಬರುತ್ತಿದೆ.

ಜಿಲ್ಲೆಯಲ್ಲಿ ಪಾಲಕ–ಶಿಕ್ಷಕರ ಸಮನ್ವಯಕ್ಕೂ ಹೆಚ್ಚಿನ ಒತ್ತು ನೀಡಲಾಗಿದ್ದು, ‘ಬನ್ನಿ ಬನ್ನಿ ಶಾಲೆಗೆ’ ಎಂಬ ಘೋಷವಾಕ್ಯದೊಂದಿಗೆ ಪಾಲಕ–ಶಿಕ್ಷಕರ ಮಹಾಸಭೆಗಳನ್ನು ಆಯೋಜಿಸಲಾಗುತ್ತಿದೆ. ಇದೇ ಘೋಷಣೆಯೊಂದಿಗೆ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತಂದು, ಅವರಿಗೆ ಉತ್ತಮ ಭವಿಷ್ಯ ರೂಪಿಸುವ ಕಾರ್ಯವೂ ಪರಿಣಾಮಕಾರಿಯಾಗಿ ನಡೆಯುತ್ತಿದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲಾ ಮುಖ್ಯ ಶಿಕ್ಷಕರಿಗೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಲ್ಲದೆ, ಮಾನ್ಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಗುಣಾತ್ಮಕ ಫಲಿತಾಂಶ ಸಾಧನೆಯಲ್ಲಿ ನಮ್ಮೆಲ್ಲರ ಪಾತ್ರ ಕುರಿತು ವಿಶೇಷ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ.

ಜಿಲ್ಲೆಯ ಶಾಲೆಗಳಲ್ಲಿ ಪರೀಕ್ಷೆಯನ್ನು ಒತ್ತಡದ ವಿಷಯವಲ್ಲದೆ, ಒಂದು ಹಬ್ಬದಂತೆ ಆಚರಿಸುವ ಸಂಸ್ಕೃತಿಯನ್ನು ಬೆಳೆಸಲಾಗುತ್ತಿರುವುದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಇದರಿಂದ ಮಕ್ಕಳಲ್ಲಿ ಪರೀಕ್ಷೆಯ ಭಯ ಕಡಿಮೆಯಾಗಿದ್ದು, ಆತ್ಮವಿಶ್ವಾಸ ಹೆಚ್ಚಾಗಿದೆ.

“ಬನ್ನಿ ಬದಲಾಗೋಣ, ಬದಲಿಸೋಣ, ಪ್ರಗತಿ ಸಾಧಿಸೋಣ” ಎಂಬ ಘೋಷವಾಕ್ಯದೊಂದಿಗೆ, ಅತ್ಯುತ್ತಮ ಫಲಿತಾಂಶ ನಮ್ಮದಾಗಲಿ ಎಂಬ ಆಶಾಭಾವನೆಯೊಂದಿಗೆ ಜಿಲ್ಲೆಯ ಶಿಕ್ಷಕರು, ಶಿಕ್ಷಣಾಧಿಕಾರಿಗಳು, ಪಾಲಕರು ಮತ್ತು ಆಡಳಿತ ವರ್ಗ ಒಟ್ಟಾಗಿ ಶ್ರಮಿಸುತ್ತಿದೆ. ಈ ಸಮಗ್ರ ಪ್ರಯತ್ನಗಳಿಂದಾಗಿ ಜಿಲ್ಲೆಯಲ್ಲಿ ಈ ವರ್ಷವೂ ಗುಣಾತ್ಮಕ ಹಾಗೂ ಮಾದರಿಯಾದ ಫಲಿತಾಂಶ ಕಾಣಿಸಿಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತವಾಗುತ್ತಿದೆ. ಗದಗ ಜಿಲ್ಲೆಯಲ್ಲಿ ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ತಯಾರಿ ವ್ಯವಸ್ಥಿತ ಹಾಗೂ ಫಲಿತಾಂಶೋನ್ಮುಖವಾಗಿದ್ದು, ಶೇ. 100ರಷ್ಟು ಗುಣಾತ್ಮಕ ಫಲಿತಾಂಶ ಸಾಧನೆಯತ್ತ ಜಿಲ್ಲೆಯು ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದೆ.

– ಎಂ.ಎಚ್. ಸವದತ್ತಿ
ತಾಂತ್ರಿಕ ಸಹಾಯಕರು,
ಸಮಗ್ರ ಶಿಕ್ಷಣ ಕರ್ನಾಟಕ–ಗದಗ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!