ವಿಜಯಸಾಕ್ಷಿ ಸುದ್ದಿ, ಗದಗ: 2025ರ ಕನ್ನಡ ರಾಜ್ಯೋತ್ಸವ ಗದಗ ಜಿಲ್ಲೆಯಲ್ಲಿ ಶಿಸ್ತುಬದ್ಧವಾಗಿ, ವಿಜೃಂಭಣೆಯಿಂದ ನಡೆದಿದೆ. ನಾಡಿನ ಗತವೈಭವ ಸ್ಮರಿಸುತ್ತಾ ನಾಡಹಬ್ಬ ಆಚರಿಸಿದ್ದೇವೆ. 2023 ನವೆಂಬರ್ ತಿಂಗಳಲ್ಲಿ ಗದುಗಿನ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಿಂದ ಬರೆದಿಡುವ ಕಾರ್ಯಕ್ರಮ ಮಾಡಲಾಗಿತ್ತು. 1961ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಹೆಸರು ನಾಮಕರಣ ಮಾಡಬೇಕೆಂದು ಸರ್ವಾನುಮತದಿಂದ ನಿರ್ಣಯ ಕೈಗೊಂಡು ಸಾರ್ವಜನಿಕ ಸಭೆಯ ಮೂಲಕ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದಿನ ಗತವೈಭವ ಮರುಕಳಿಸುವಂತೆ 2023ರಲ್ಲಿ ವೀರನಾರಾಯಣ ದೇವಸ್ಥಾನದಿಂದ 20ಕ್ಕೂ ಹೆಚ್ಚು ಸಚಿವ ಸಂಪುಟದ ಸದಸ್ಯರು, ಶಾಸಕರು, ಜನಪ್ರತಿನಿಧಿಗಳು ಹಾಗೂ ಸಹಸ್ರ ಸಂಖ್ಯೆಯ ಜನರ ಸಮ್ಮುಖದಲ್ಲಿ ಮತ್ತೊಮ್ಮೆ ದೊಡ್ಡ ಕಾರ್ಯಕ್ರಮ ನಡೆಸಿ, ಕರ್ನಾಟಕ ಸಂಭ್ರಮ 50 ಹೆಸರಿನಲ್ಲಿ ಗತವೈಭವ ಮರುಸೃಷ್ಟಿ ಮಾಡಿದ್ದೇವೆ ಎಂದರು.
ನಮ್ಮ ಕನ್ನಡ ನಾಡಿನಲ್ಲಿ ಬಡತನವನ್ನು ಸಂಪೂರ್ಣ ನಿರ್ಮೂಲನೆ ಮಾಡಿದ್ದೇವೆ. ಕನ್ನಡದ ಪ್ರತಿ ಅರ್ಹ ಕುಟುಂಬಗಳಿಗೆ ಗ್ಯಾರಂಟಿ ಯೋಜನೆ ನೀಡಿದ್ದೇವೆ. ಇದಕ್ಕಾಗಿ ಪ್ರತಿ ವರ್ಷ 60 ಸಾವಿರ ಕೋಟಿ ರೂ ಹಣ ಖರ್ಚು ಮಾಡಿ ಜನರ ಬದುಕು ಹಸನುಗೊಳಿಸಿ ಬಡತನ ದೂರ ಮಾಡಿದ್ದೇವೆ. ಜಿಲ್ಲೆಯಲ್ಲಿ ಶೇ. 99.4ರಷ್ಟು ಜನರಿಗೆ ಗ್ಯಾರಂಟಿ ಯೋಜನೆಗಳು ತಲುಪಿವೆ ಎಂದರು.
ಮಳೆಯಿಂದ ರೈತರು ತತ್ತರಿಸಿ ಹೋಗಿದ್ದಾರೆ. ಬಹಳಷ್ಟು ಬೆಳೆಗಳು ಮಳೆಯಿಂದ ಹಾನಿಯಾಗಿವೆ. ಭಾನುವಾರ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಹೆಬ್ಬೆಟ್ಟು ಒತ್ತುವ ಮೂಲಕ ಪರಿಹಾರದ ಹಣ ನೀಡಲಿದ್ದೇವೆ. ಅಭಿವೃದ್ಧಿ ವಿಚಾರದಲ್ಲಿ ರಾಜ್ಯದಲ್ಲಿ ಸಮೀಕ್ಷೆಯಲ್ಲಿ 7ನೇ ಸ್ಥಾನವನ್ನು ಗದಗ ಜಿಲ್ಲೆ ಪಡೆದುಕೊಂಡಿದ್ದು, ಇದು ನಾವೆಲ್ಲರೂ ಸಂತೋಷಪಡುವ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲೇ ನಂಬರ್ ಒನ್ ಜಿಲ್ಲೆ ಮಾಡುವ ಗುರಿ ಹೊಂದಲಾಗಿದೆ ಎಂದರು.
ಈ ವೇಳೆ ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್, ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ ಅಸೂಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ ಪಾಟೀಲ ಉಪಸ್ಥಿತರಿದ್ದರು.
ನಗರದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಪ್ರಭುವಿನೆಡೆಗೆ ಪ್ರಭುತ್ವ ಯೋಜನೆ, ರಾಜ್ಯದಲ್ಲೇ ಮೊದಲ ಬಾರಿಗೆ ಥರ್ಡ್ ಐ, ಶಾಲಾ ಶಿಕ್ಷಕರಿಗೆ ಮೊಬೈಲ್ ಮೂಲಕ ಹಾಜರಾತಿ ಕಲ್ಪಿಸಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದೇವೆ. ಈ ಮೂಲಕ ರಾಜ್ಯದಲ್ಲಿ ಗದಗ ಜಿಲ್ಲೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಇದಕ್ಕೆ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ಸಚಿವ ಎಚ್.ಕೆ. ಪಾಟೀಲ ಹೆಮ್ಮೆ ವ್ಯಕ್ತಪಡಿಸಿದರು.


