ರಾಂಚಿ: ಜಾರ್ಖಂಡ್ ರಾಜ್ಯದ ಛತ್ರಾ ಜಿಲ್ಲೆ ಸಮೀಪ ಏರ್ ಅಂಬುಲೆನ್ಸ್ ವಿಮಾನ ಪತನಗೊಂಡಿರುವ ದುರ್ಘಟನೆ ಸಂಭವಿಸಿದೆ. ರಾಂಚಿಯಿಂದ ದೆಹಲಿಯತ್ತ ಏಳು ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ರೆಡಾರ್ ಸಂಪರ್ಕ ಕಳೆದುಕೊಂಡು ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಜೆ 7:34ರ ಸುಮಾರಿಗೆ ಎಟಿಸಿಯೊಂದಿಗೆ ಸಂಪರ್ಕ ಕಡಿತಗೊಂಡಿದೆ. ವಿಮಾನದಲ್ಲಿ ಪೈಲೆಟ್ ಸೇರಿ ಒಟ್ಟು 7 ಮಂದಿ ಇದ್ದರು. ಇವರಲ್ಲಿ ರೋಗಿ, ವೈದ್ಯರು ಹಾಗೂ ನರ್ಸ್ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಎಲ್ಲರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಈ ವಿಮಾನವು ರೆಡ್‌ಬರ್ಡ್ ಏರ್‌ವೇಸ್ ಪ್ರೈ.ಲಿ ಸಂಸ್ಥೆಗೆ ಸೇರಿದ ಬೀಚ್ ಕ್ರಾಫ್ಟ್ ಕಿಂಗ್ ಏರ್ BE9L ಚಾರ್ಟೆಡ್ ವಿಮಾನವಾಗಿದೆ.
ಪೊಲೀಸರು ಹಾಗೂ ರಕ್ಷಣಾ ಪಡೆಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ. ಅರಣ್ಯ ಪ್ರದೇಶದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.



