ಮಂಗಳೂರು:- ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನವಾದ ದುರಂತದಲ್ಲಿ ಕರ್ನಾಟಕ ಮೂಲದ ಕೋ ಪೈಲಟ್ ಕೂಡ ಸಾವನ್ನಪ್ಪಿರುವ ಮಾಹಿತಿ ಇದೀಗ ಲಭ್ಯವಾಗಿದೆ. ಕ್ಲೈವ್ ಕುಂದರ್ ಮೃತ ಪೈಲಟ್. ಇವರು ಕರ್ನಾಟಕದ ಕರಾವಳಿ ಮೂಲದವರು ಎನ್ನಲಾಗಿದೆ.
ಕ್ಲೈವ್ ಕುಂದರ್ ಅವರು ಮುಂಬೈನಲ್ಲಿ ವಾಸವಾಗಿದ್ದರು. ಕ್ಲೈವ್ ಕುಂದರ್ ಫಸ್ಟ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕ್ಲೈವ್ ಕುಂದರ್ ಅವರಿಗೆ 1100 ಗಂಟೆ ವಿಮಾನ ಹಾರಾಟ ನಡೆಸಿದ ಅನುಭವವಿತ್ತು. ಕ್ಲೈವ್ ಕುಂದರ್ ಅವರು ಪತನಗೊಂಡ ಏರ್ ಇಂಡಿಯಾದ AI-171 ವಿಮಾನದ ಕೋ ಪೈಲಟ್ ಆಗಿದ್ದರು.
ದುರಂತದಲ್ಲಿ ಗುಜರಾತ್ ನ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 242 ಜನರು ಮೃತಪಟ್ಟಿದ್ದಾರೆ ಎಂದು ಅಹಮದಾಬಾದ್ ನಗರ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ. ಇಂದು ಅಹಮದಾಬಾದ್ ವಿಮಾನ ನಿಲ್ದಾಣದಿಂದ 242 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಐದೇ ನಿಮಿಷಕ್ಕೆ ಅಪಘಾತಕ್ಕೀಡಾಗಿದೆ.
ಆಗಿದ್ದೇನು?
ಗುಜರಾತ್ನ ಅಹಮದಾಬಾದ್‌ನಿಂದ ಗ್ಯಾಟ್ವಿಕ್ ಗೆ ಹೋಗುತ್ತಿದ್ದ ಏರ್ ಇಂಡಿಯಾ ಎಐ 171 ವಿಮಾನ ಇಂದು ಮಧ್ಯಾಹ್ನ ಟೇಕ್ ಆಫ್ ಆದ ತಕ್ಷಣ ಪತನಗೊಂಡಿತು. 12 ಸಿಬ್ಬಂದಿ ಸೇರಿದಂತೆ 242 ಜನರು ಈ ವಿಮಾನದಲ್ಲಿದ್ದರು. ಈ ವಿಮಾನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಇದ್ದ ಡಾಕ್ಟರ್ ಹಾಸ್ಟೆಲ್ನೊಳಗೆ ನುಗ್ಗಿದೆ. ಇದರಿಂದ ವಿಮಾನದಲ್ಲಿರುವ ಪ್ರಯಾಣಿಕರು ಮಾತ್ರವಲ್ಲದೆ 15 ವೈದ್ಯಕೀಯ ವಿದ್ಯಾರ್ಥಿಗಳು ಕೂಡ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚಿನ ಅತಿ ದುರಂತವಾದ ವಿಮಾನ ಅಪಘಾತ ಇದಾಗಿದೆ.