ಬೆಂಗಳೂರು: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಯು ಗುಣಮಟ್ಟ ಹದಗೆಡುತ್ತಿದ್ದು, ವಾಯುಮಾಲಿನ್ಯ ಆತಂಕಕಾರಿ ಮಟ್ಟ ತಲುಪುತ್ತಿದೆ.
ಇದೇ ಸ್ಥಿತಿ ಮುಂದುವರೆದರೆ, ಮುಂದಿನ ದಿನಗಳಲ್ಲಿ ದೆಹಲಿಯಂತೆಯೇ ಇಲ್ಲಿಯೂ ಉಸಿರಾಡುವುದೇ ಕಷ್ಟವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಡಿಸೆಂಬರ್ 12ರಂದು ನಗರದಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ (AQI) 175 ದಾಖಲಾಗಿದ್ದು, ಇಂದು ಅದು 186ರಿಂದ 206ರ ವರೆಗೆ ಏರಿಕೆ ಕಂಡಿದೆ. ಇದರಿಂದ ಉಸಿರಾಟ ಸಂಬಂಧಿತ ಸಮಸ್ಯೆಗಳ ಅಪಾಯ ಹೆಚ್ಚುವ ಸಾಧ್ಯತೆ ಇದೆ.
ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯ ಪ್ರಕಾರ, PM2.5 ಪ್ರಮಾಣ 5 ಮೈಕ್ರೋಗ್ರಾಮ್‌ಗಿಂತ ಹೆಚ್ಚಾದರೆ ಉಸಿರಾಟದ ಸಮಸ್ಯೆಗಳು ಉಂಟಾಗಬಹುದು. ಆದರೆ ಭಾರತೀಯ ಸುರಕ್ಷತಾ ಮಾನದಂಡಗಳ ಪ್ರಕಾರ 40 ಮೈಕ್ರೋಗ್ರಾಮ್‌ಗಿಂತ ಕಡಿಮೆ PM2.5 ಸ್ವೀಕಾರಾರ್ಹವೆಂದು ಪರಿಗಣಿಸಲಾಗಿದೆ. PM10 ಪ್ರಮಾಣಕ್ಕೂ 50 ಮೈಕ್ರೋಗ್ರಾಮ್‌ವರೆಗೆ ಮಿತಿ ನಿಗದಿಯಿದೆ. ಪ್ರಸ್ತುತ ಬೆಂಗಳೂರಿನಲ್ಲಿ PM2.5 ಪ್ರಮಾಣ 95 ಮೈಕ್ರೋಗ್ರಾಮ್ ಹಾಗೂ PM10 ಪ್ರಮಾಣ 96 ಮೈಕ್ರೋಗ್ರಾಮ್ ದಾಖಲಾಗಿದ್ದು, ಇದು ಗಂಭೀರ ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ ಉಸಿರಾಟದ ತೊಂದರೆ ಇರುವವರು ಹೆಚ್ಚಿನ ಜಾಗ್ರತೆ ವಹಿಸಬೇಕಾಗಿದೆ.
PM ಎಂದರೆ ಗಾಳಿಯಲ್ಲಿ ಇರುವ ಸೂಕ್ಷ್ಮ ಕಣಗಳು. ವಾಹನಗಳು, ಕೈಗಾರಿಕೆಗಳು ಹಾಗೂ ಇಂಧನದ ಹೊಗೆಯಿಂದ PM2.5 ಕಣಗಳು ಉತ್ಪತ್ತಿಯಾಗುತ್ತವೆ. ಕಟ್ಟಡ ನಿರ್ಮಾಣದ ಧೂಳು ಮತ್ತು ಪರಾಗಗಳಿಂದ PM10 ಕಣಗಳು ಹೆಚ್ಚಾಗುತ್ತವೆ. ಈ ಕಣಗಳ ಪ್ರಮಾಣ ಮಿತಿ ಮೀರಿದಾಗ ಆಸ್ತಮಾ ಸೇರಿದಂತೆ ವಿವಿಧ ಉಸಿರಾಟದ ಕಾಯಿಲೆಗಳು ಹೆಚ್ಚಾಗುತ್ತವೆ. ಇದಲ್ಲದೆ ಕಾರ್ಬನ್ ಮೊನಾಕ್ಸೈಡ್, ಓಜೋನ್ ಹಾಗೂ ನೈಟ್ರೋಜನ್ ಡೈಆಕ್ಸೈಡ್‌ಗಳ ಹೆಚ್ಚಳವೂ ಗಾಳಿಯನ್ನು ಉಸಿರಾಡಲು ಅಸಹ್ಯವಾಗುವಂತೆ ಮಾಡುತ್ತದೆ. ಸದ್ಯ ಬೆಂಗಳೂರು ಮಾತ್ರವಲ್ಲದೆ ಅರೇಕೆರೆ, ಬೆಳ್ಳಂದೂರು ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿಯೂ ವಾಯು ಗುಣಮಟ್ಟ ತೀವ್ರ ಕುಸಿತ ಕಂಡಿದೆ.
ನಗರವಾರು AQI:
ಬೆಂಗಳೂರು – 180
ಮಂಗಳೂರು – 146
ಮೈಸೂರು – 118
ಬೆಳಗಾವಿ – 143
ಕಲಬುರಗಿ – 77
ಶಿವಮೊಗ್ಗ – 77
ಬಳ್ಳಾರಿ – 167
ಹುಬ್ಬಳ್ಳಿ – 90
ಉಡುಪಿ – 85
ವಿಜಯಪುರ – 79



