ಬೆಂಗಳೂರು: ಇಂದು ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಗಮನಾರ್ಹವಾಗಿ ಕುಸಿದಿದ್ದು, ನಗರಾದ್ಯಂತ ಗಾಳಿಯ ಗುಣಮಟ್ಟ ಸೂಚ್ಯಂಕ ಮಧ್ಯಮದಿಂದ ಕಳಪೆ ಮಟ್ಟದವರೆಗೆ ದಾಖಲಾಗಿದೆ.
ಬೆಳಿಗ್ಗೆಯಿಂದ ಸಂಜೆಯವರೆಗೆ AQI ಸರಾಸರಿ 89 ರಿಂದ 159ರ ನಡುವೆ ಇರಲಿದೆ ಎಂದು ಅಂದಾಜಿಸಲಾಗಿದೆ. ನೆನ್ನೆ ಈ ಮಟ್ಟ ಸುಮಾರು 85ರಷ್ಟಿತ್ತು. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕಾಣಿಸಿಕೊಂಡಿರುವ ಅಪರೂಪದ ಗಾಳಿಯ ಗುಣಮಟ್ಟ ಇದಾಗಿದೆ.
ಗಾಳಿಯ ಗುಣಮಟ್ಟ ಕುಸಿತಕ್ಕೆ PM2.5 ಮತ್ತು PM10 ಕಣಗಳ ಪ್ರಮಾಣ ಹೆಚ್ಚಾಗಿರುವುದು ಪ್ರಮುಖ ಕಾರಣವಾಗಿದೆ. PM2.5 ಪ್ರಮಾಣ ಸುಮಾರು 54 µg/m³ ಆಗಿದೆ. ಇದರ ಹಿನ್ನೆಲೆಯಲ್ಲಿ ಮಕ್ಕಳು, ವೃದ್ಧರು ಹಾಗೂ ಉಸಿರಾಟ ಸಂಬಂಧಿತ ಸಮಸ್ಯೆ ಹೊಂದಿರುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.
ನಗರದ ವಿವಿಧ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಕಳಪೆಯಾಗಿರುವುದು ದಾಖಲಾಗಿದೆ. ರೈಲ್ವೆ ನಿಲ್ದಾಣ, ಹೆಬ್ಬಾಳ ಮತ್ತು ಬಿಟಿಎಂ ಲೇಔಟ್ ಪ್ರದೇಶಗಳಲ್ಲಿ AQI 80–100ರ ವ್ಯಾಪ್ತಿಯಲ್ಲಿ ಇದೆ. ಬೆಳ್ಳಂದೂರಿನಲ್ಲಿ ಗಾಳಿಯ ಮಟ್ಟ 142–151, ವೈಟ್ಫೀಲ್ಡ್ನಲ್ಲಿ 37–144, ರೇಷ್ಮೆ ಬೋರ್ಡ್ನಲ್ಲಿ 147, ಹಾಗೂ ಬಿಡಬ್ಲ್ಯೂಎಸ್ಎಸ್ಬಿ ಕಡಬೇಸನಹಳ್ಳಿಯಲ್ಲಿ 153 AQI ದಾಖಲಾಗಿದೆ.
ರಾಜ್ಯದ ಇತರೆ ನಗರಗಳಲ್ಲಿ ಮಂಗಳೂರಿನಲ್ಲಿ ಸಾಮಾನ್ಯ ಗಾಳಿಯ ಗುಣಮಟ್ಟ ಕಂಡುಬಂದಿದ್ದು AQI 85 ಆಗಿದೆ. ಮೈಸೂರಿನಲ್ಲಿ 88, ಬೆಳಗಾವಿಯಲ್ಲಿ 100 ದಾಖಲಾಗಿದೆ. ಕಲಬುರ್ಗಿಯಲ್ಲಿ ಗಾಳಿಯ ಮಟ್ಟ ಅಪಾಯದ ಹಂತದಲ್ಲಿದ್ದು 122ಕ್ಕೆ ಏರಿಕೆಯಾಗಿದೆ. ಶಿವಮೊಗ್ಗದಲ್ಲಿ ಗಾಳಿಯ ಗುಣಮಟ್ಟ ಉತ್ತಮವಾಗಿದ್ದು 66 ಇದೆ.
ಇನ್ನು ಬಳ್ಳಾರಿಯಲ್ಲಿ ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಇಂದು AQI 172ಕ್ಕೆ ತಲುಪಿದೆ. ಹುಬ್ಬಳ್ಳಿಯಲ್ಲಿ ನೆನ್ನೆಗಿಂತ ಸುಧಾರಣೆ ಕಂಡುಬಂದಿದ್ದು 80 ದಾಖಲಾಗಿದೆ. ಉಡುಪಿಯಲ್ಲಿ 75, ವಿಜಯಪುರದಲ್ಲಿ ಗಾಳಿಯ ಗುಣಮಟ್ಟ ಕಳಪೆಯ ಹಂತದಲ್ಲಿದ್ದು 153 ಇದೆ.
ಗಾಳಿಯ ಗುಣಮಟ್ಟ ಸೂಚ್ಯಂಕ (AQI) ವರ್ಗೀಕರಣ:
ಉತ್ತಮ: 0–50
ಮಧ್ಯಮ: 50–100
ಕಳಪೆ: 100–150
ಅನಾರೋಗ್ಯಕರ: 150–200
ಗಂಭೀರ: 200–300
ಅಪಾಯಕಾರಿ: 300–500+



