ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಇಂದು (ಜನವರಿ 8, 2026) ವಾಯು ಗುಣಮಟ್ಟದ ಸೂಚ್ಯಂಕ (AQI) ವಿಭಿನ್ನ ಮಟ್ಟದಲ್ಲಿ ದಾಖಲಾಗಿದೆ. ಚಳಿಗಾಲದ ಪ್ರಭಾವ ಹಾಗೂ ವಾಹನ ಸಂಚಾರದ ಒತ್ತಡದಿಂದಾಗಿ ಕೆಲವು ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ ಸ್ವಲ್ಪ ಹೆಚ್ಚಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಹೆಬ್ಬಾಳ, ಬಿಟಿಎಂ ಲೇಔಟ್ ಮತ್ತು ಪೀಣ್ಯ ಭಾಗಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಿರುವುದು ಗಮನಕ್ಕೆ ಬಂದಿದೆ. ಮುಂಜಾನೆ ಹಾಗೂ ಸಂಜೆ ಸಮಯದಲ್ಲಿ ವಾಹನಗಳ ದಟ್ಟಣೆಯಿಂದಾಗಿ AQI ಮಟ್ಟ 170ರ ಗಡಿ ದಾಟುವ ಸಾಧ್ಯತೆ ಇದೆ.
ರಸ್ತೆ ಧೂಳು ಮತ್ತು ಹಳೆಯ ವಾಹನಗಳಿಂದ ಹೊರಬರುವ ಹೊಗೆ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿವೆ. ಉಸಿರಾಟದ ತೊಂದರೆ ಇರುವವರು, ಮಕ್ಕಳು ಮತ್ತು ಹಿರಿಯ ನಾಗರಿಕರು ಅನಗತ್ಯವಾಗಿ ಹೊರಗೆ ಓಡಾಡುವುದನ್ನು ಕಡಿಮೆ ಮಾಡಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ ಎನ್–95 (N95) ಮಾಸ್ಕ್ ಧರಿಸುವುದು ಸೂಕ್ತ ಎಂದು ಸೂಚಿಸಲಾಗಿದೆ. ವಾಯು ಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಮುಂಜಾನೆ ವಾಕಿಂಗ್‌ಗೆ ಹೋಗುವುದನ್ನು ತಪ್ಪಿಸುವುದು ಉತ್ತಮ. ಗಾಳಿಯ ಗುಣಮಟ್ಟ ಸುಧಾರಣೆಗೆ ಗಿಡಗಳನ್ನು ಬೆಳೆಸುವುದು ಅಥವಾ ಸಾಧ್ಯವಾದಲ್ಲಿ ಏರ್ ಪ್ಯೂರಿಫೈಯರ್ ಬಳಸುವಂತೆ ಸಲಹೆ ನೀಡಲಾಗಿದೆ.
ಇನ್ನೂ ಕರಾವಳಿ ನಗರ ಮಂಗಳೂರಿನಲ್ಲಿ ಗಾಳಿಯ ಗುಣಮಟ್ಟ ‘ಅನಾರೋಗ್ಯಕರ’ ಮಟ್ಟಕ್ಕೆ ತಲುಪಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ನಗರದ ವಿವಿಧ ಭಾಗಗಳಲ್ಲಿ AQI 150ರ ಗಡಿ ದಾಟಿದ್ದು, ಚಳಿಗಾಲದ ಹವಾಮಾನ ಮತ್ತು ಸ್ಥಳೀಯ ನಿರ್ಮಾಣ ಕಾಮಗಾರಿಗಳು ಹಾಗೂ ವಾಹನ ಸಂಚಾರ ಇದಕ್ಕೆ ಕಾರಣ ಎನ್ನಲಾಗಿದೆ. ಸಾಮಾನ್ಯವಾಗಿ ಉತ್ತಮ ಗಾಳಿಯ ಗುಣಮಟ್ಟ ಹೊಂದಿರುವ ಮಂಗಳೂರಿನಲ್ಲಿ ಈ ಬದಲಾವಣೆ ಜನರಲ್ಲಿ ಆತಂಕ ಮೂಡಿಸಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಾಳಿಯ ಗುಣಮಟ್ಟ ಸ್ವಲ್ಪ ಹದಗೆಟ್ಟಿದ್ದು, ಹೆಬ್ಬಾಳ ಮತ್ತು ವಿವೇಕಾನಂದ ನಗರ ಭಾಗಗಳಲ್ಲಿ AQI 150 ದಾಟಿದೆ. ಇದು ಉಸಿರಾಟದ ಸಮಸ್ಯೆ ಇರುವವರಿಗೆ ಹಾನಿಕಾರಕವಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಬಳ್ಳಾರಿಯಲ್ಲಿ ಸದ್ಯಕ್ಕೆ ಗಾಳಿಯ ಗುಣಮಟ್ಟ ‘ಸಾಧಾರಣ’ ಸ್ಥಿತಿಯಲ್ಲಿದೆ. ಆದರೆ ಗಣಿ ಮತ್ತು ಕೈಗಾರಿಕಾ ಚಟುವಟಿಕೆಗಳ ಸಮೀಪದ ಪ್ರದೇಶಗಳಲ್ಲಿ ಧೂಳಿನ ಕಣಗಳ (PM10) ಪ್ರಮಾಣ ಹೆಚ್ಚಾಗಿ ಕಂಡುಬರುತ್ತಿದೆ. ಬೆಳಗಾವಿಯಲ್ಲಿ ಗಾಳಿಯ ಗುಣಮಟ್ಟ ಸುಮಾರು AQI 82ರಷ್ಟಿದ್ದು, ಸಾಧಾರಣ ಮಟ್ಟದಲ್ಲಿದೆ. ಮುಂಜಾನೆ ಮಂಜು ಹೆಚ್ಚಿರುವುದರಿಂದ ವೃದ್ಧರು ಮತ್ತು ಮಕ್ಕಳು ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ.
ಹುಬ್ಬಳ್ಳಿ–ಧಾರವಾಡ ಅವಳಿ ನಗರಗಳಲ್ಲಿ ಗಾಳಿಯ ಗುಣಮಟ್ಟ 70 ರಿಂದ 110ರ ನಡುವೆ ಬದಲಾಗುತ್ತಿದ್ದು, ಮುಖ್ಯ ರಸ್ತೆಗಳಲ್ಲಿ ವಾಹನಗಳ ಹೊಗೆಯಿಂದಾಗಿ ಗಾಳಿ ಸ್ವಲ್ಪ ಕಲುಷಿತಗೊಂಡಿದೆ ಎಂದು ವರದಿಯಾಗಿದೆ.



