ತುಮಕೂರು:– ಶಿರಾ ಬಳಿ ಇಂಟರ್ ನ್ಯಾಷನಲ್ ಏರ್ಪೋರ್ಟ್ ನಿರ್ಮಾಣ ವಿಚಾರವಾಗಿ ಜಯಚಂದ್ರ ಸೇರಿ 35 ಜನ ಶಾಸಕರು ಪತ್ರ ಬರೆದ ವಿಚಾರವಾಗಿ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ತುಮಕೂರಿನಲ್ಲಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ನಮನ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಜಿ. ಪರಮೇಶ್ವರ್, ಇದನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕು. ಶಿರಾ ಭಾಗದಲ್ಲಿ ಆದ್ರೆ ನಮಗೆ ಸಂತೋಷವಾಗುತ್ತೆ. ಎರಡು ಕಡೆ ಸರ್ವೆ ಮಾಡಿದ್ದಾರೆ. ಒಂದು ನೆಲಮಂಗಲ, ಕನಕಪುರ ಭಾಗದಲ್ಲಿ ಸರ್ವೆ ಮಾಡಿದ್ದಾರೆ. ಅವರದ್ದೇ ಆದ ಪ್ಯಾರಾಮೀಟರ್ಸ್ ಇದೆ. ಪ್ಯಾರಮೀಟರ್ಸ್ ಅಡಿಯಲ್ಲೇ ರೆಕಮೆಂಡೇಷನ್ ಮಾಡ್ತಾರೆ. ಶಿರಾಗೆ ಸರ್ವೆಗೆ ಬಂದಿಲ್ಲ, ಬಂದ್ರೆ ಸಂತೋಷವಾಗುತ್ತದೆ ಎಂದರು.
ಇನ್ನೂ ಶಿವಕುಮಾರ ಸ್ವಾಮೀಜಿಗಳ ಜನ್ಮದಿನಾಚರಣೆಗೆ ಬರಲು ಆಗಿರಲಿಲ್ಲ. ಇವತ್ತು ಸ್ವಾಮೀಜಿಗೆ ಗೌರವ ಸಮರ್ಪಣೆ ಮಾಡಲು ಬಂದಿದ್ದೇನೆ. ಸಿದ್ದಲಿಂಗಸ್ವಾಮೀಜಿಗೆ ನಮನ ಸಲ್ಲಿಸಿದ್ದೇನೆ. ನಮ್ಮ ಕುಟುಂಬಕ್ಕೂ ಮಠಕ್ಕೂ ಅವಿನಾಭವ ಸಂಬಂಧವಿದೆ. ನಮ್ಮ ತಂದೆ ಹಾಗೂ ಹಿರಿಯ ಸ್ವಾಮೀಜಿ ಜೊತೆಗೆ ಇದ್ದಂತಹ ಸಂಬಂಧ ಯಾವಾಗಲೂ ಇರುತ್ತದೆ. ನಾವು ಈ ಸಂಬಂಧವನ್ನು ನಾವು ಮುನ್ನಡೆಸಿಕೊಂಡು ಹೋಗುತ್ತೇವೆ ಎಂದರು. ತುಮಕೂರು ರೈಲ್ವೇ ನಿಲ್ದಾಣ ಸ್ವಾಮೀಜಿ ಅವರ ಹೆಸರಿನಲ್ಲಿ ಶಾಶ್ವತವಾಗಿ ಇರುತ್ತದೆ ಎಂದರು.