ಕಾಬೂಲ್: ಕಾಬೂಲ್‌ನಲ್ಲಿರುವ ಆಸ್ಪತ್ರೆ ಮೇಲೆ ಪಾಕಿಸ್ತಾನ ನಡೆಸಿದ ಭೀಕರ ವೈಮಾನಿಕ ದಾಳಿಯನ್ನು ಅಫ್ಘಾನಿಸ್ತಾನ ಕ್ರಿಕೆಟ್ ಆಟಗಾರರು ತೀವ್ರವಾಗಿ ಖಂಡಿಸಿದ್ದಾರೆ.
ಅಫ್ಘಾನಿಸ್ತಾನ ತಂಡದ ಖ್ಯಾತ ಆಟಗಾರ ರಶೀದ್ ಖಾನ್ ಈ ದಾಳಿಗೆ ಕಿಡಿಕಾರಿದ್ದು, ಪಾಕಿಸ್ತಾನ ಸೇನೆಯ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದಾರೆ.
ಪವಿತ್ರ ರಂಜಾನ್ ತಿಂಗಳಲ್ಲೇ ನಡೆದ ಈ ದಾಳಿಯಿಂದ ಉಂಟಾದ ಜೀವಹಾನಿಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ನಾಗರಿಕರ ಮನೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ವೈದ್ಯಕೀಯ ಮೂಲಸೌಕರ್ಯಗಳನ್ನು ಗುರಿಯಾಗಿಸುವುದು ಗಂಭೀರ ತಪ್ಪು ಎಂದು ಹೇಳಿದ್ದಾರೆ. “ಇದು ಯುದ್ಧಾಪರಾಧ” ಎಂದು ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಮುಂದುವರಿದು, ಇಂತಹ ಅಮಾನವೀಯ ಕೃತ್ಯಗಳು ದ್ವೇಷ ಮತ್ತು ವಿಭಜನೆಯನ್ನು ಹೆಚ್ಚಿಸುತ್ತವೆ. ಈ ದಾಳಿಯ ಕುರಿತು ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದು ವಿಶ್ವಸಂಸ್ಥೆ ಮತ್ತು ಮಾನವ ಹಕ್ಕು ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ತಮ್ಮ ದೇಶದ ಜನರೊಂದಿಗೆ ನಿಲ್ಲುವುದಾಗಿ ಹೇಳಿದ್ದಾರೆ.
ಈ ಭೀಕರ ದಾಳಿಯಲ್ಲಿ 400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸುಮಾರು 250 ಜನರು ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನ ಇತಿಹಾಸದಲ್ಲೇ ಇದು ಅತ್ಯಂತ ಭಾರೀ ದಾಳಿಗಳಲ್ಲೊಂದು ಎಂದು ಹೇಳಲಾಗುತ್ತಿದೆ.
ಸ್ಥಳೀಯ ಸಮಯದ ಪ್ರಕಾರ ರಾತ್ರಿ ಸುಮಾರು 9 ಗಂಟೆಗೆ, 2,000 ಹಾಸಿಗೆ ಸಾಮರ್ಥ್ಯವಿರುವ ದೊಡ್ಡ ಆಸ್ಪತ್ರೆಯನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಲಾಗಿದೆ. ಈ ಕುರಿತು ಅಫ್ಘಾನಿಸ್ತಾನದ ಉಪ ಸರ್ಕಾರಿ ವಕ್ತಾರ ಹಮ್ದುಲ್ಲಾ ಫಿತ್ರಾತ್ ಮಾಹಿತಿ ನೀಡಿದ್ದಾರೆ.



