ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಜಿತ್ ಕಾಲಿಗೆ ಪೆಟ್ಟಾದ ಹಿನ್ನೆಲೆಯಲ್ಲಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಂದ ಹಾಗೆ ಅಜಿತ್ ಚೆನ್ನೈ ವಿಮಾನ ನಿಲ್ದಾಣಕ್ಕೆ ಹೋದ ವೇಳೆ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದಿದ್ದಾರೆ. ಈ ವೇಳೆ ಜನಜಂಗುಳಿಯಲ್ಲಿ ಅಜಿತ್ ಕುಮಾರ್ ಕಾಲಿಗೆ ಏಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇತ್ತೀಚೆಗೆ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಲು ಅಜಿತ್ ಕುಮಾರ್ ದೆಹಲಿಗೆ ತೆರಳಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಚಿತ್ರರಂಗದಲ್ಲಿ ಸಾಧನೆ ಮಾಡಿದ ಅಜಿತ್ ಅವರಿಗೆ ಈ ಗೌರವ ಸಿಕ್ಕಿದೆ. ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಚೆನ್ನೈಗೆ ವಾಪಸ್ ಬರುವಾಗ ಅಜಿತ್ ಕಾಲಿಗೆ ಗಾಯವಾಗಿದೆ.
ದೆಹಲಿಯಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದ ಅಜಿತ್ ಕುಮಾರ್ ಅವರನ್ನು ಭೇಟಿ ಮಾಡಿ ಅಭಿನಂದನೆ ತಿಳಿಸಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಅಜಿತ್ ಬರುತ್ತಿರುವ ವಿಷಯ ಮೊದಲೇ ತಿಳಿದಿದ್ದರಿಂದ ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ಜನರನ್ನು ನಿಯಂತ್ರಿಸುವುದೇ ಕಷ್ಟ ಆಯಿತು. ಈ ವೇಳೆ ಉಂಟಾದ ನೂಕು ನುಗ್ಗಲಿನಲ್ಲಿ ಅಜಿತ್ ಕುಮಾರ್ ಅವರ ಕಾಲಿಗೆ ಪೆಟ್ಟಾಗಿತ್ತು.
ಆದರೆ ಇದು ಸಮಸ್ಯೆ ತೀರ ಗಂಭೀರವಾಗಿಲ್ಲ. ಸದ್ಯಕ್ಕೆ ಅವರಿಗೆ ಫಿಜಿಯೋ ಥೆರಪಿ ನೀಡುವ ಸಲುವಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಕೆಲವೇ ಗಂಟೆಗಳಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂಬ ಮಾಹಿತಿ ಸಿಕ್ಕಿದ್ದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.