ವಿಜಯಸಾಕ್ಷಿ ಸುದ್ದಿ, ಗದಗ: ನಾವು ನಡೆ-ನುಡಿ, ತನು-ಮನ, ಭಾವಗಳು ಶುಚಿಯಾಗಿರುವವರ, ಪರಿಪೂರ್ಣವಾಗಿರುವವರ ಮಾರ್ಗದರ್ಶನದಲ್ಲಿ ನಡೆದು ಇನ್ನಿತರರಿಗೂ ಮಾದರಿಯಾಗಿರಬೇಕು. ಅಂದು ಅಕ್ಕಮಹಾದೇವಿ ತಿಳಿಸಿದ ಅವರ ವಚನಗಳು ಈಗಿರುವ ಪರಿಸ್ಥಿತಿಗೆ ಸೂಕ್ತ ಮಾರ್ಗದರ್ಶಿಯಾಗಿವೆ. ಹೀಗಾಗಿ ವೈರಾಗ್ಯನಿಧಿ ಅಕ್ಕಮಹಾದೇವಿ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಸಮಾಜ ಸೇವಾಸಕ್ತರಾದ ಅನ್ನಪೂರ್ಣಕ್ಕ ವರವಿ ತಿಳಿಸಿದರು.
ಅವರು ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರವು ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ನಡೆಸಿದ ಅಕ್ಕನ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಇಡೀ ವಿಶ್ವಕ್ಕೆ ಅಕ್ಕನಾಗಿರುವ ಅಕ್ಕಮಹಾದೇವಿ ಜನ್ಮಸ್ಥಳವಾದ ಉಡುತಡಿಯ ಅಭಿವೃದ್ಧಿ ಬಗ್ಗೆ ಚಿಂತಿಸದಿರುವುದು ಮನದಲ್ಲಿ ಕಾಡುತ್ತಿದೆ. ಆಸಕ್ತರು, ಸಂಬಂಧಿಸಿದವರಿಂದ ಉಡುತಡಿ ಅಭಿವೃದ್ಧಿ ಕುರಿತು ಸರಕಾರ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನವಾಗಬೇಕೆಂದು ವಿನಂತಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ವಿಜಯಲಕ್ಷ್ಮೀ ಆನೆಹೊಸೂರು, ಗದಗ-ಬೆಟಗೇರಿ ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ, ಯೋಗ ಸಾಧಕಿ ಸುನಂದಾ ಹುಣಸಿಮರದ ಪ್ರಾಸಂಗಿಕವಾಗಿ ಮಾತನಾಡಿದರು.
ಗೌರಿ ಜಿರಂಕಳಿ, ಮಹಾದೇವಿ ಚರಂತಿಮಠ, ವಿಜಯಲಕ್ಷ್ಮೀ ಮೇಕಳಿ ಅಕ್ಕನ ವಚನ ಹೇಳಿ ವಿಶ್ಲೇಷಣೆ ಮಾಡಿದರು. ಸುನಂದಾ ಜ್ಯಾನೋಪಂತರ ಅಕ್ಕನ ಚರಿತ್ರೆ ತಿಳಿಸುವ ಗೀತೆಯನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಗಿರಿಜಾ ನಾಲತ್ವಾಡಮಠ ಸಭೆಯಲ್ಲಿ ನೆರೆದ ಮಹಿಳೆಯರೆಲ್ಲರಿಗೂ ಉಡಿತುಂಬುವ ಸೇವಾ ಕಾರ್ಯ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಸುಲೋಚನಾ ಮತ್ತು ಡಾ. ಮಲ್ಲಿಕಾರ್ಜುನ ಐಹೊಳ್ಳಿ ದಂಪತಿಗಳನ್ನು ಅವರ 40ನೇ ವರ್ಷದ ವಿವಾಹ ಮಹೋತ್ಸವದ ನಿಮಿತ್ತ ಸನ್ಮಾನಿಸಲಾಯಿತು.
ಪುಷ್ಪಾ ಹಿರೇಮಠ, ಅರುಣಾ ಇಂಗಳಳ್ಳಿ, ಪಾರ್ವತಿ ಭೂಮಾ, ಜಯಶ್ರೀ ಡಾವಣಗೇರಿ, ಗಿರಿಜಾ ಅಂಗಡಿ, ಸವಿತಾ ಬೀರನೂರ, ಕವಿತಾ ಬುಳ್ಳಾ, ಅನ್ನಪೂರ್ಣ ಕೋರಿ, ಶೋಭಾ ಭಾಂಡಗೆ, ಅನ್ನಪೂರ್ಣ ಅಸೂಟಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವೀಣಾಶ್ರೀ ಮಾಲಿಪಾಟೀಲ ಪ್ರಾರ್ಥನೆ ಹೇಳಿದರು. ಸುಲೋಚನಾ ಐಹೊಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ವಸ್ತ್ರದ ವಂದಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಸವ ಧರ್ಮಾಭಿಮಾನಿಗಳಾದ ನಂದಿನಿ ಗೊಡಚಿ ಮಾತನಾಡಿ, ಅಕ್ಕಮಹಾದೇವಿ ಜಯಂತಿ ಕೇವಲ ಅಕ್ಕನ ಬಳಗ, ಮಹಿಳಾ ಮಂಡಳ, ಸಂಘ-ಸಂಸ್ಥೆ, ಸರಕಾರಿ ಕಚೇರಿಗಳಿಗೆ ಸೀಮಿತವಾಗಿರದೆ ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಆಚರಿಸುವಂತಾದರೆ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು ಕಡಿಮೆಯಾಗಬಹುದು ಎಂದು ಅಭಿಪ್ರಾಯಪಟ್ಟರು.



