ವಿಜಯಸಾಕ್ಷಿ ಸುದ್ದಿ, ಧಾರವಾಡ: ಅಕ್ಷರ ದೀಪ ಫೌಂಡೇಶನ್, ಅಕ್ಷರ ದೀಪ ಪ್ರಕಾಶನ ಗದಗ, ಸ್ನೇಹಜೀವಿ ಫೌಂಡೇಶನ್ ಕರ್ನಾಟಕ ಇವರ ಸಹಯೋಗದಲ್ಲಿ ಅಕ್ಷರೋತ್ಸವ-2025 ಕಾರ್ಯಕ್ರಮವು ಧಾರವಾಡದ ರಂಗಾಯಣದಲ್ಲಿ ವಿಜೃಂಭಣೆಯಿಂದ ಜರುಗಿತು.
ಸಮಾರಂಭದ ಉದ್ಘಾಟಿಸಿದ ಡಾ. ಎಸ್.ಜಿ. ಅಂಟಿನಮಠ ಹಾಗೂ ಡಾ. ಯಾಕೊಳ್ಳಿ ಮಾತನಾಡಿ, ಅಕ್ಷರ ದೀಪ ವೇದಿಕೆಯ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ಜರುಗುವುದರೊಂದಿಗೆ ಕನ್ನಡ ನಾಡಿನ ವೈಭವದ ಮೌಲ್ಯಗಳನ್ನೂ ಸಹ ಬಹುಕಾಲ ಜೀವಂತವಾಗಿರಿಸಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ರಾಮಕೃಷ್ಣ ಶಿರೂರು ಮೂಡಬಿದಿರೆ ಮಾತನಾಡಿ, ಅಕ್ಷರ ದೀಪ ಫೌಂಡೇಶನ್ ಕಾರ್ಯ, ಸಾಧನೆ ಹಾಗೂ ಕಾರ್ಯಕ್ರಮಗಳು ಒಂದೇ ದಿನ ಜರುಗದೇ, ವರ್ಷದುದ್ದಕ್ಕೂ ಇಂತಹ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿರಬೇಕು. ಎಲೆಮರೆಯ ಕಾಯಿಯಂತಿರುವ ಅದೆಷ್ಟೋ ಜನರು ತಮ್ಮಲ್ಲಿ ಅಡಗಿರುವ ಸಾಹಿತ್ಯ ಹಾಗೂ ಪ್ರತಿಭೆಯ ಅನಾವರಣ ಈ ಮೂಲಕ ಆಗಬೇಕಿದೆ. ಶ್ರೀ ಪ್ರವೀಣಕುಮಾರ ಕನ್ಯಾಳರ ಕಾರ್ಯಕ್ಕೆ ನಾವೆಲ್ಲರೂ ಸಹಕಾರ ನೀಡೋಣ ಎಂದರು. ರೂಪಕ ಸಾಮ್ರಾಜ್ಯ ಚಕ್ರವರ್ತಿ ಕುಮಾರವ್ಯಾಸರ ಕುರಿತು ತ್ನಾ ಬದಿ ಉಪನ್ಯಾಸ ನೀಡಿದರು.
ಅಕ್ಷರ ದೀಪ ಯೂಟ್ಯೂಬ್ ಚಾನೆಲ್‌ನ್ನು ಉತ್ತರ ಕರ್ನಾಟಕದ ಖ್ಯಾತ ಯೂಟ್ಯೂಬ್ ಸ್ಟಾರ್ ಲಪಂಗರಾಜ ಲೋಕಾರ್ಪಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕವಿ, ಸಾಹಿತಿ ಗಣಪತಿ ಹೆಗಡೆ ದಾಂಡೇಲಿ, ನಟಿ ಹಾಗೂ ಗಾಯಕಿ ಕುಮಾರಿ ಸ್ಟೆಫಿ ಲೂಯಿಸ್ ಮಾತನಾಡಿದರು.
ಅಕ್ಷರ ದೀಪ ಫೌಂಡೇಶನ್ ಅಧ್ಯಕ್ಷ ಪ್ರವೀಣಕುಮಾರ ಕನ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿ, ತಮ್ಮ ಸಂಸ್ಥೆ ಇದುವರೆಗೆ ಮಾಡುತ್ತ ಬಂದಿರುವ ಕಾರ್ಯಸಾಧನೆ ಹಾಗೂ ಮುಂದಿನ ಗುರಿಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕುಮಾರವ್ಯಾಸ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಕ್ಷರ ದೀಪ ಫೌಂಡೇಶನ್ ಧಾರವಾಡದ ಜಿಲ್ಲಾಧ್ಯಕ್ಷರಾದ ಅರ್ಚನಾ ಪಾಟೀಲ ಸ್ವಾಗತಿಸಿದರು. ವೈಷ್ಣವಿ ಪ್ರಾರ್ಥಿಸಿದರು. ಅಕ್ಷರ ದೀಪ ಫೌಂಡೇಶನ್ ಬೆಳಗಾವಿ ಜಿಲ್ಲಾಧ್ಯಕ್ಷರಾದ ರೋಹಿಣಿ ಮಿರ್ಜೆ ನಿರೂಪಿಸಿದರು. ಪ್ರವೀಣಕುಮಾರ ಕನ್ಯಾಳ ವಂದಿಸಿದರು.