ಮುಂಬೈನಲ್ಲಿ ಸೋಮವಾರ ರಾತ್ರಿ ನಡೆದ ಅಪಘಾತದಲ್ಲಿ ಮರ್ಸಿಡೀಸ್ ಕಾರು ಆಟೋಗೆ ಡಿಕ್ಕಿ ಹೊಡೆದು, ನಂತರ ಇನೋವಾ ಕಾರಿಗೆ ಢಿಕ್ಕಿ ಹೊಡೆದಿದೆ. ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರ ಭದ್ರತಾ ಸಿಬ್ಬಂದಿಯ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಉರುಳಿ ಬಿದ್ದಿದೆ.
ವಿದೇಶ ಪ್ರವಾಸ ಮುಗಿಸಿ ಪತ್ನಿ ಟ್ವಿಂಕಲ್ ಖನ್ನಾ ಜೊತೆ ಅಕ್ಷಯ್ ಕುಮಾರ್ ಮುಂಬೈಗೆ ವಾಪಸ್ ಆಗಿದ್ದರು. ಏರ್‌ಪೋರ್ಟ್‌ನಿಂದ ಜುಹು ನಿವಾಸಕ್ಕೆ ತೆರಳುವ ವೇಳೆ ವೇಗವಾಗಿ ಬಂದ ಮರ್ಸಿಡಿಸ್ ಕಾರೊಂದು ಮೊದಲು ಆಟೋಗೆ ಡಿಕ್ಕಿ ಹೊಡೆದು, ನಂತರ ನೇರವಾಗಿ ಅಕ್ಷಯ್ ಕುಮಾರ್ ಭದ್ರತಾ ಸಿಬ್ಬಂದಿಯ ಕಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರು ಸಂಪೂರ್ಣವಾಗಿ ಪಲ್ಟಿ!
ಇದಷ್ಟೇ ಅಲ್ಲ, ಆ ಕಾರು ಅಕ್ಷಯ್ ಪ್ರಯಾಣಿಸುತ್ತಿದ್ದ ವಾಹನಕ್ಕೂ ತಾಕಿದೆ ಎನ್ನಲಾಗಿದೆ. ಸ್ಥಳದಲ್ಲಿ ಭಾರಿ ಗೊಂದಲ ಉಂಟಾಗಿ ಜನರು ಲೈವ್ ವೀಡಿಯೊ ರೆಕಾರ್ಡ್ ಮಾಡಲು ಆರಂಭಿಸಿದರು. ಕೆಲವೇ ಕ್ಷಣದಲ್ಲಿ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಘಟನೆ ನಡೆದ ತಕ್ಷಣ ಅಕ್ಷಯ್ ಕುಮಾರ್ ಸ್ವತಃ ಕಾರಿನಿಂದ ಇಳಿದು ಗಾಯಾಳುಗಳಿಗೆ ಸಹಾಯ ಮಾಡಿದ್ದು ವಿಶೇಷ. ಆಟೋ ಚಾಲಕನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವಂತೆ ತಮ್ಮ ಸಿಬ್ಬಂದಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಅಪಘಾತಕ್ಕೆ ಮರ್ಸಿಡಿಸ್ ಚಾಲಕನ ನಿರ್ಲಕ್ಷ್ಯವೇ ಕಾರಣವೇ? ಅಥವಾ ಇನ್ನೇನಾದರೂ ಕಾರಣ ಇದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಸದ್ಯಕ್ಕೆ ಅಕ್ಷಯ್ ಕುಮಾರ್ ಅಥವಾ ಅವರ ತಂಡದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಆದರೆ ಈ ಘಟನೆ ಬಾಲಿವುಡ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.



