ಚಿಕ್ಕಮಗಳೂರು: ತಮ್ಮ ಹಗರಣಗಳಿಗೆ ರಕ್ಷಣೆ ಇರಲಿ ಎಂದು ಸಿದ್ದರಾಮಯ್ಯರನ್ನು ನಟೋರಿಯಸ್ ಗ್ಯಾಂಗ್ ಖೆಡ್ಡಾಗೆ ಕೆಡವಿಕೊಂಡಿದೆ ಎಂದು ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಎಷ್ಟು ಡಿನೋಟಿಫೈ ಮಾಡಿದ್ದಾರೆ, ಯಾವ ಕಾರಣಗಳಿಗೆ ಮಾಡಿದ್ದಾರೆ. ಯಾರ‌್ಯಾರಿಗೆ ಬದಲಿ ನಿವೇಶನ ಕೊಟ್ಟಿದ್ದಾರೆ ಎಲ್ಲವೂ ಹೊರಬರುತ್ತೆ. ಸೆಟ್ಲ್ಮೆಂಟ್ ಡೀಡ್ ಅನ್ನುವುದೇ ಪ್ರಾಧಿಕಾರದಲ್ಲಿ ಇರುವುದಿಲ್ಲ. ಎಲ್ಲರೂ ದೊಡ್ಡ ದೊಡ್ಡ ಪ್ರಭಾವಿಗಳೇ ಇರೋದು. ನಮ್ಮ ಬಳಿ ಆರೋಪ ಸಾಬೀತು ಮಾಡುವ ಕೆಲ ದಾಖಲೆಗಳಿವೆ ಎಂದಿದ್ದಾರೆ.
ಇನ್ನೂ ಮೂಡಾ ಪ್ರಕರಣ ಬೆಳಕಿಗೆ ಬಂದ ತಕ್ಷಣ ನಗರ ಅಭಿವೃದ್ಧಿ ಸಚಿವ ಭೈರತಿ ಬಸವರಾಜ್ ಮೈಸೂರಿಗೆ ಹೋಗಿ ದಾಖಲೆ ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ತನಿಖೆ ಕೊಡುವ ಮೂರು ದಿನದ ಮುಂಚೆ ವಾರಗಟ್ಟಲೆ ಮೈಸೂರಿನಲ್ಲಿ ಕುಳಿತ್ತಿದ್ದರು. ಕೆಲವು ದಾಖಲೆಗಳನ್ನು ಇಲ್ಲದಂತೆ ಮಾಡಿದ್ದಾರೆ.
ಹಳೆಯ ಅಧಿಕಾರಿಗಳನ್ನು ಕರೆಸಿ ಸಹಿ ಮಾಡಿಸಿದ್ದಾರೆ ಎಂಬ ದೂರು ನಮಗೆ ಬಂದಿತ್ತು. ನಾವು ತನಿಖೆಗೆ ಆಗ್ರಹಿಸಿ ಬೆಂಗಳೂರಿನಿಂದ ಮೈಸೂರುವರೆಗೂ ಪಾದಯಾತ್ರೆ ಮಾಡಿದ್ದೇವೆ. ಸ್ವಜನಪಕ್ಷಪಾತ, ಅಧಿಕಾರ ದುರುಪಯೋಗ, ಭ್ರಷ್ಟಾಚಾರ ಮೂರು ನಡೆಸಿದೆ. ನಮ್ಮ ಹತ್ತಿರವು ಕೆಲ ದಾಖಲೆಗಳಿವೆ. ನ್ಯಾಯಾಲಯ ತನಿಖೆಗೆ ಆದೇಶ ನೀಡಿದ ಬಳಿಕ ದಾಖಲೆಗಳನ್ನು ನೀಡುತ್ತೇವೆ. ನ್ಯಾಯಾಲಯದ ತೀರ್ಪನ್ನು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.