ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಹೊಂಬಳ ಗ್ರಾಮಕ್ಕೆ ಮಂಜೂರಾಗಿದ್ದ ಜಿಲ್ಲಾ ಕೃಷಿ ತರಬೇತಿ ಕೇಂದ್ರವನ್ನು ಸದ್ದಿಲ್ಲದೇ ಹುಲಕೋಟಿ ಗ್ರಾಮದ ಕೆವಿಕೆಗೆ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಭೂಮಿ ವರ್ಗಾವಣೆ ಪ್ರಕ್ರಿಯೆಯೂ ನಡೆದಿದೆ. ಇದರ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಕೈವಾಡವಿದೆ ಎಂದು ಬಿಜೆಪಿ ಯುವ ಮುಖಂಡ ವಸಂತ ಪಡಗದ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಹೊಂಬಳ ಭಾಗದಲ್ಲಿ ಕೃಷಿ ಇಲಾಖೆಗೆ ಸಂಬAಧಿಸಿದ 50 ಎಕರೆಗೂ ಅಧಿಕ ಜಮೀನು ಇದೆ. ಹೊಂಬಳ ಭಾಗದಲ್ಲಿ ಹೆಸರು, ಶೇಂಗಾ, ಹತ್ತಿ, ಕಡಲೆ, ಕುಸುಬೆ ಹಾಗೂ ಗೋಧಿ ಬೆಳೆಗಳನ್ನು ಅಧಿಕವಾಗಿ ಬೆಳೆಯಲಾಗುತ್ತದೆ. ಈ ಭಾಗದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಸ್ಥಾಪನೆ ಸೂಕ್ತವಾಗಿತ್ತು. ಆದರೆ, ಈ ಭಾಗದಲ್ಲಿ ಕಪ್ಪು ಮಣ್ಣು ಇರುವ ಕಾರಣ ಕಟ್ಟಡ ನಿರ್ಮಿಸಲು ಸೂಕ್ತವಲ್ಲ. ಬದಲಾಗಿ ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದ ಅಗ್ರಿಕಲ್ಚರ್ ಸೈನ್ಸ್ ಫೌಂಡೇಶನ್ ಅಧೀನದಲ್ಲಿನ ಕೃಷಿ ತರಬೇತಿ ಕೇಂದ್ರ ಸ್ಥಾಪಿಸಲು ಸೂಕ್ತ ಆದೇಶ ಹೊರಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಪತ್ರದ ಆಧಾರದಲ್ಲಿ ಈಗಾಗಲೇ ಜಮೀನು ಹಸ್ತಾಂತರ ಪ್ರಕ್ರಿಯೆಯೂ ನಡೆದಿದೆ. ಜಿಲ್ಲೆಗೆ ಮಂಜೂರಾಗುವ ಎಲ್ಲ ಪ್ರಮುಖ ಕೇಂದ್ರಗಳನ್ನು ಹುಲಕೋಟಿಗೆ ವರ್ಗಾವಣೆ ಮಾಡಿಕೊಳ್ಳುವ ಸಚಿವರು, ಇತರೆ ಗ್ರಾಮಗಳಿಗೆ ಅನ್ಯಾಯ ಎಸಗುತ್ತಿದ್ದಾರೆ ಎಂದು ವಸಂತ ಪಡಗದ ಆರೋಪಿಸಿದ್ದಾರೆ.