ದಾವಣಗೆರೆ: ನಿನ್ನೆ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಅವರು ವೀರಶೈವ ಸಮಾಜದ ಸಭೆ ನಡೆಸಿ ದಾವಣಗೆರೆಯ ಜನತೆಗೆ ಬಹಳಷ್ಟು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಶಾಸಕ ಬಿ.ಪಿ.ಹರೀಶ್ ಅವರು ಆಕ್ಷೇಪಿಸಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾವು ದುಡ್ಡಿದ್ದಂತ, ಕೇವಲ ಕಾಂಗ್ರೆಸ್ ವೀರಶೈವರ ಹಾಗೂ ಶ್ರೀಮಂತರ ಪಾಲಾಗಿದೆ ಎಂದು ಟೀಕಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಬಿಜೆಪಿ ಕಚೇರಿಯಲ್ಲಿ ಇಂದು ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಭ್ರಷ್ಟಾಚಾರ ಮಾಡಲು, ರಾಜಕೀಯ ಪಕ್ಷಗಳನ್ನು ಹೆದರಿಸಿ ಮಂತ್ರಿ ಸ್ಥಾನ ಪಡೆಯಲು ಈ ಮಹಾಸಭಾವನ್ನು ಇವರು ದುರುಪಯೋಗ ಪಡಿಸಿಕೊಂಡಿದ್ದಾರೆ. ಬಡ ವೀರಶೈವರಿಗೆ ಇವರ ಕೊಡುಗೆ ಇಲ್ಲ ಎಂದು ಟೀಕಿಸಿದರು.
ಈಶ್ವರ ಖಂಡ್ರೆ ಅವರು ಬಹಳ ಮುಜುಗರದಿಂದ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಅಭ್ಯರ್ಥಿ ಸಮರ್ಥ ಅವರ ತಂದೆಯ ಒಡೆತನದ ಸಕ್ಕರೆ ಕಾರ್ಖಾನೆ, ಡಿಸ್ಟಿಲರೀಸ್ನಿಂದ ಕೈಗಾರಿಕಾ ತ್ಯಾಜ್ಯವನ್ನು ಸರಿಯಾಗಿ ಸಂಸ್ಕರಿಸದೇ ನೇರವಾಗಿ ತುಂಗಭದ್ರಾ ನದಿಗೆ ಬಿಡಲಾಗುತ್ತಿದೆ. ಅರಣ್ಯ ಸಚಿವರಾದ ತಮ್ಮ ಅಡಿಯಲ್ಲೇ ಮಾಲಿನ್ಯ ನಿಯಂತ್ರಣ ಮಂಡಳಿಯೂ ಇದೆ. ಇಂಥ ಅಭ್ಯರ್ಥಿ ಪರವಾಗಿ ತಾವು ಮಾತನಾಡಿದ್ದು ಸರಿಯೇ ಎಂದು ಕೇಳಿದರು.
ರೈತರ ಜಮೀನಿನ ಬೆಳೆಗಳ ಮೇಲೆ ಹಾರು ಬೂದಿ ದೂಳು ಬೀಳುತ್ತಿದೆ. ಬಡ ರೈತರಿಗೆ ಅನ್ಯಾಯ ಮಾಡುತ್ತಿರುವ ಬಗ್ಗೆ ಸದನದಲ್ಲಿ ಎತ್ತಿದಾಗ ಖಂಡ್ರೆಯವರು ಸುಳ್ಳು ಮಾಹಿತಿ ಕೊಟ್ಟಿದ್ದರು. ಖಂಡ್ರೆಯವರೇ, ಮಲ್ಲಿಕಾರ್ಜುನ್ ಅವರ ದುರಾಡಳಿತ, ಕುಡಿಯುವ ನೀರಿನ ಮೇಲಿನ ದುಷ್ಪರಿಣಾಮ ನಿಮಗೆಲ್ಲ ಗೊತ್ತಿದೆ. ಎವಿಕೆ ಕಾಲೇಜು ಸ್ಥಾಪಿಸಿ ಯುವತಿಯರಿಗೆ ಶಿಕ್ಷಣ ಸಿಗುವಂತೆ ಮಾಡಿದ್ದಾಗಿ ಹೇಳಿದ್ದೀರಿ.
ಖಂಡ್ರೆಯವರೇ, ಸುಳ್ಳು ಮಾಹಿತಿ ಕೊಡದಿರಿ. ದಾವಣಗೆರೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಲು ರಾಜನಳ್ಳಿ, ಅಜ್ಜಂಪುರ ಮನೆತನದವರು, ದಾನಿಗಳು ದೊಡ್ಡ ಕೊಡುಗೆ ನೀಡಿದ್ದಾರೆ. ಚಿಗಟೇರಿ ಆಸ್ಪತ್ರೆಯನ್ನು ಆ ಮನೆತನದವರ ಕೊಡುಗೆ ಮೂಲಕ ಸ್ಥಾಪಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಆ ಕೊಡುಗೆ ನೀಡಿದ್ದಾಗಿ ಸುಳ್ಳು ಹೇಳಿದ್ದೀರಲ್ಲವೇ ಎಂದು ಕೇಳಿದರು.



