ಸಂಗನಗೌಡ ಪಾಟೀಲ ಸೇರಿ 27 ಜನರ ಆಯ್ಕೆ

0
All India Veerashaiva Mahasabha State Election
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸಾಮಾನ್ಯ ಸದಸ್ಯ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಯುವ ಧುರೀಣ ಸಂಗನಗೌಡ (ಮಿಥುನ) ಜಿ.ಪಾಟೀಲ ಸೇರಿದಂತೆ 27 ಅಭ್ಯರ್ಥಿಗಳು ಹೆಚ್ಚಿನ ಮತಗಳನ್ನು ಪಡೆದುಕೊಂಡು ಆಯ್ಕೆಯಾಗಿದ್ದಾರೆ.
ಒಟ್ಟು 27 ಸ್ಥಾನಕ್ಕೆ ರಾಜ್ಯದಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಿಂದ ಒಟ್ಟು 57 ಅರ್ಭ್ಯರ್ಥಿಗಳು ಆಯ್ಕೆಗಾಗಿ ಚುನಾವಣಾ ಕಣದಲ್ಲಿದ್ದರು. ಆ. 25ರಂದು ಮತದಾನ ಜರುಗಿತು. ರಾಜ್ಯದ ಎಲ್ಲ ಜಿಲ್ಲೆಗಳಿಂದ 57 ಅಭ್ಯರ್ಥಿಗಳು ಪಡೆದುಕೊಂಡ ಮತಗಳನ್ನು ಎಣಿಕೆ ಮಾಡಿ ಬೆಂಗಳೂರಿನ ಮಹಾಸಭಾದ ಚುನಾವಣಾ ಕೇಂದ್ರಕ್ಕೆ ಜಿಲ್ಲಾ ಚುನಾವಣಾಧಿಕಗಳು ಮಾಹಿತಿಯನ್ನು ರವಾನಿಸಿದ್ದರು. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಿಂದ ಬಂದ ಮಾಹಿತಿಯನ್ನು ಕ್ರೋಢೀಕರಣ ಮಾಡಿ ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿಗಳ ಹೆಸರನ್ನು ರಾಜ್ಯ ಘಟಕದ ಚುನಾವಣಾಧಿಕಾರಿ ಸಿ.ಎಸ್. ವೀರೇಶ ಮಂಗಳವಾರ ಮಧ್ಯಾಹ್ನ ಪ್ರಕಟಿಸಿದರು.
ಗದಗ ಜಿಲ್ಲೆಯಲ್ಲಿ ಪಡೆದುಕೊಂಡ ಮತಗಳು ಸಂಗನಗೌಡ ಪಾಟೀಲ-275, ವೀರೇಶ ಕೂಗು-235, ವೀರನಗೌಡ ಪಾಟೀಲ-221 ಹಾಗೂ ಎಸ್.ಎಸ್. ಹಿರೇಮಠ 164 ಆಗಿದೆ. ಬಸವರಾಜ ಬಿಳೇಯಲಿ ಗದಗ ಜಿಲ್ಲಾ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಇವರೊಂದಿಗೆ ಎಲ್.ಎಸ್. ನೀಲಗುಂದ, ಬಿ.ಡಿ. ಪಾಟೀಲ, ರಾಚಣ್ಣ ನಾರಾಯಣಪೂರ, ಪ್ರೊ. ಎಂ.ಸಿ. ವಗ್ಗಿ, ಪ್ರೊ. ಕೆ.ಎಚ್. ಬೇಲೂರ, ಬಿ.ಎಫ್. ಡೋಣಿ, ಬಿ.ಡಿ. ಕಿಲಬನವರ, ಯಲ್ಲಮ್ಮ ಬಿಂಗಿ ಅವರು ಚುನಾವಣಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದರು.
ಗದಗ ಜಿಲ್ಲೆಯಲ್ಲಿ ಶಾಂತ ರೀತಿಯ ಚುನಾವಣೆ ಜರುಗಿಸಿದ ಚುನಾವಣಾಧಿಕಾರಿಯನ್ನು, ವಿಜೇತರಾದ ಸಂಗನಗೌಡ ಪಾಟೀಲರನ್ನು ಹಾಗೂ ಮತದಾನ ಮಾಡಿದ ಎಲ್ಲ ಮತದಾರರನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಬಸಪ್ಪ ಗುಡಿಮನಿ ಅಭಿನಂದಿಸಿದ್ದಾರಲ್ಲದೆ ಚುನಾವಣೆಗೆ ಸ್ಪರ್ಧಿಸಿದ್ದ ನಾಲ್ವರೂ ಅಭ್ಯರ್ಥಿಗಳು ಸೇರಿದಂತೆ ಜಿಲ್ಲಾ ತಾಲೂಕಾ ಪದಾಧಿಕಾರಿಗಳು, ಆಜೀವ ಸದಸ್ಯರೆಲ್ಲರೂ ಸೇರಿ ಒಳ್ಳೆ ಕೆಲಸ ಮಾಡೋಣ ಎಂದು ಮನವಿ ಮಾಡಿಕೊಂಡಿದ್ದಾರೆ.
ಗದಗ ಜಿಲ್ಲೆಯಿಂದ ನಾಲ್ವರು ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಸಂಗನಗೌಡ ಪಾಟೀಲರು 12,061 ಮತಗಳನ್ನು ಪಡೆದು ಚುನಾಯಿತರಾಗಿದ್ದಾರೆ. ಇನ್ನೂ ಮೂವರು ಅಭ್ಯರ್ಥಿಗಳಾದ ಶಿರಹಟ್ಟಿಯ ವೀರನಗೌಡ ಪಾಟೀಲ 2,364, ಮುಂಡರಗಿಯ ಎಸ್.ಎಸ್. ಹಿರೇಮಠ 2,111 ಹಾಗೂ ಗದುಗಿನ ವೀರೇಶ ಕೂಗು 1,817 ಮತಗಳನ್ನು ಪಡೆದುಕೊಂಡಿದ್ದಾರೆ. 

Spread the love
Advertisement

LEAVE A REPLY

Please enter your comment!
Please enter your name here