ವಿಜಯಸಾಕ್ಷಿ ಸುದ್ದಿ, ಗದಗ: ರಾಜ ರಾಜಕಾರಣದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟಿತರಾದ ಮೇಲೆ ಮಾನಸಿಕ ಖಿನ್ನತೆಗೆ ಒಳಗಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕೆಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ರಾಜ್ಯಾಧ್ಯಕ್ಷ ಮಹ್ಮದಶಫಿ ಎಸ್.ನಾಗರಕಟ್ಟಿ ಹೇಳಿದರು.
ಮಹಾಸಭಾದ ಕಚೇರಿಯಲ್ಲಿ ನಡೆದ ಖಂಡನಾ ಸಭೆಯಲ್ಲಿ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳರು ಮುಸ್ಲಿಂ ಸಮುದಾಯದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳಿನಕಾರಿ ಹೇಳಿಕೆ ನೀಡುತ್ತಿರುವುದನ್ನು ನಿಲ್ಲಿಸಬೇಕು. ಮುಸ್ಲಿಂ ಸಮುದಾಯದಲ್ಲಿ ಪ್ರವಾದಿಗಳು ಅತ್ಯಂತ ಗೌರವ ಸ್ಥಾನ ಹೊಂದಿದ್ದಾರೆ. ಅವರ ಅವಹೇಳನವನ್ನು ಸಮುದಾಯ ಸಹಿಸುವುದಿಲ್ಲ.
ಸಮುದಾಯ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತದೆ. ಕರ್ನಾಟಕವು ಬಸವಾದಿ ಶರಣರು, ಸಂತರು ನಡೆದಾಡಿದ ಭೂಮಿಯಾಗಿದೆ. ಇಲ್ಲಿ ಎಲ್ಲರೂ ಕೋಮ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಅಲ್ಲದೆ, ವಿಜಯಪುರ ಬಸವಣ್ಣನವರ ತವರಾಗಿದೆ. ಅಂತಹ ಜಿಲ್ಲೆಯಲ್ಲಿ ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕಾರ್ಯವನ್ನು ಯತ್ನಾಳ ಮಾಡುತ್ತಿದ್ದಾರೆ. ಅವರೊಬ್ಬ ಜನಪ್ರತಿನಿಧಿ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲೆ ಹಾಗೂ ಗದಗ ಜಿಲ್ಲೆಯ ಉಸ್ತುವಾರಿಗಳು, ಗದಗ ಜಿಲ್ಲಾಧ್ಯಕ್ಷ ಜಾಫರ ಡಾಲಾಯತ, ರಹೀಂಸಾಬ ದೊಡ್ಡಮನಿ, ಮುನ್ನಾ ಕಲ್ಮನಿ, ಇರ್ಫಾನ್ ನದಾಫ್, ಇಬ್ರಾಹಿಂ ಮುಲ್ಲಾ, ಅನಿಸ್ ಬಾಗವಾನ್, ಯಾಸಿನ್ ಮುಲ್ಲಾ, ಯೂನಿಸ್ ಮುಲ್ಲಾದರವೇಸ್, ಅಫ್ಜಲ್ ಮನಿಯಾರ, ಯಾಸಿನ್ ಖವಾಸ್ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.


