ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಟ್ಟಣದ ಸ್ಕೂಲ್ ಚಂದನಕ್ಕೆ ಆಗಮಿಸಲಿದ್ದು, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ಸಿದ್ಧತೆಗಳನ್ನು ಪರಿಶೀಲಿಸಿದರು.
ಮುಖ್ಯಮಂತ್ರಿಗಳಿಗೆ ಹೆಲಿಪ್ಯಾಡ್‌ನಿಂದ ವೇದಿಕೆಗೆ ಆಗಮಿಸಲು ವಿಶೇಷ ವಾಹನ ವ್ಯವಸ್ಥೆ, ಪತ್ರಿಕಾಗೋಷ್ಠಿ, ಮನವಿ ಅರ್ಪಿಸುವ ಸ್ಥಳಗಳು, ವಾಹನ ನಿಲುಗಡೆ ಇತ್ಯಾದಿಗಳನ್ನು ಸರಿಯಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ಬೃಹತ್ ವೇದಿಕೆ ಸಿದ್ಧವಾಗಿದ್ದು, ಸುಮಾರು 3-4 ಸಾವಿರ ಆಸನಗಳ ವ್ಯವಸ್ಥೆ, ಗಣ್ಯರಿಗೆ ವಿಶೇಷ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದರು.
ಬೆಳಿಗ್ಗೆ 11.15ಕ್ಕೆ ಲಕ್ಷ್ಮೇಶ್ವರಕ್ಕೆ ಆಗಮಿಸುವ ಸಿ.ಎಂ ಸಿದ್ದರಾಮಯ್ಯನವರು ಭಾರತ ರತ್ನ ಸಿಎನ್‌ಆರ್ ರಾವ್ ಅವರಿಂದ ನಡೆಯುವ 10ನೇ ವರ್ಷದ ರಾಷ್ಟ್ರೀಯ ವಿಜ್ಞಾನ ವಿಸ್ತೃತ ಕಾರ್ಯಕ್ರಮ, ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್. ಪಾಟೀಲ ಅವರಿಗೆ ಚಂದನ ಸಂಸ್ಥೆಯ ಪ್ರತಿಷ್ಠಿತ `ಚಂದನ ಶ್ರೀ’ ಪ್ರಶಸ್ತಿ ಪ್ರದಾನ ಮತ್ತು ಸಂಸ್ಥೆಯ ನಿರ್ದೇಶಕರಾಗಿದ್ದ ನಿವೃತ್ತ ಶಿಕ್ಷಕ ದಿ. ಎಚ್.ಸಿ. ರಟಗೇರಿ ಅವರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮ ಉದ್ಘಾಟಿಸುವರು.
ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಜರುಗಲಿದೆ. ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ, ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ, ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರು, ವಿಜ್ಞಾನಿಗಳು ಆಗಮಿಸುವರು ಎಂದು ಸಂಸ್ಥೆಯ ಟಿ. ಈಶ್ವರ ತಿಳಿಸಿದರು.
ಈ ವೇಳೆ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ಉಪವಿಭಾಗಾಧಿಕಾರಿ ಗಂಗಪ್ಪ, ಪಿಡಿ ಬಸನಗೌಡ ಕೋಟೂರು, ತಹಸೀಲ್ದಾರ ಧನಂಜಯ ಎಂ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಲೋಕೋಪಯೋಗಿ ಇಲಾಖೆ ಎಇಇ ಫಕ್ಕೀರೇಶ ತಿಮ್ಮಾಪೂರ, ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ನಾಗರಾಜ ಗಡಾದ, ಮಂಜುನಾಥ ಮುದಗಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.



