ರಾಮನಗರ: ಸ್ಯಾಂಡಲ್ವುಡ್ಗೆ ಮಠ, ಎದ್ದೇಳು ಮಂಜುನಾಥನಂತಹ ಸಿನಿಮಾಗಳನ್ನು ಕೊಟ್ಟಿದ್ದ ನಿರ್ದೇಶಕ ಗುರುಪ್ರಸಾದ್ ಅವರು ಸಾವನ್ನಪ್ಪಿದ್ದಾರೆ. ನಗರದ ಮಾದನಾಯಕನಹಳ್ಳಿ ಅಪಾರ್ಟ್ಮೆಂಟ್ ಒಂದರಲ್ಲಿ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದೆ. ಇನ್ನೂ ನಿರ್ದೇಶಕ ಗುರುಪ್ರಸಾದ್ ನಿಧನಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಹೌದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಿರ್ದೇಶಕ ಗುರುಪ್ರಸಾದ್ ಆತ್ಮಕ್ಕೆ ಶಾಂತಿಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಕನ್ನಡ ಚಿತ್ರರಂಗ ಸಂಕಷ್ಟದಲ್ಲಿದೆ. ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು ಆರ್ಥಿಕ ಸಂಕಷ್ಟ ಅಥವಾ ಯಾವುದೋ ಸಮಸ್ಯೆಗೆ ಸಿಲುಕಿ ದುಡುಕಿನ ನಿರ್ಧಾರ ಕೈಗೊಳ್ಳುತ್ತಿರುವುದು ದುರಂತ. ಏನೇ ಸಮಸ್ಯೆಗಳಿದ್ದರೂ ಎಲ್ಲವನ್ನು ಧೈರ್ಯವಾಗಿ ಎದುರಿಸಬೇಕು. ಇಂತಹ ನಿರ್ಧಾರ ಸರಿಯಲ್ಲ ಎಂದು ಹೇಳಿದರು.
ಇನ್ನೂ ಮರಣೋತ್ತರ ಪರೀಕ್ಷೆಯ ನಂತರ ನಿರ್ದೇಶಕ ಗುರುಪ್ರಸಾದ್ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ. ಇದಕ್ಕೂ ಮುನ್ನ ಮೊಬೈಲ್ ಹಾಗೂ ಫ್ಲ್ಯಾಟ್ ಸೀಜ್ ಮಾಡುವ ಪೊಲೀಸರು ಕುಟುಂಬಸ್ಥರು ಬಂದ ಮೇಲೆ ಅವರ ಸಮ್ಮುಖದಲ್ಲಿಯೇ ಫ್ಲ್ಯಾಟ್ನಲ್ಲಿ ಪರಿಶೀಲನೆ ನಡೆಸಲಿದ್ದಾರೆ.


