ವಿಜಯಸಾಕ್ಷಿ ಸುದ್ದಿ, ಗದಗ: ವಿಶೇಷ ಅಗತ್ಯಗಳುಳ್ಳ ಮಕ್ಕಳ ಶೈಕ್ಷಣಿಕ ಕಲಿಕಾ ಅಗತ್ಯತೆಗಳನ್ನು ಪೂರೈಸುವುದೇ ವಿಶೇಷ ಶಿಕ್ಷಣದ ಮೂಲ ಉದ್ದೇಶವಾಗಿದ್ದು, ಇಂತಹ ಮಕ್ಕಳ ಸರ್ವಾಂಗಿಣ ಅಭಿವೃದ್ಧಿಯೇ ನಮ್ಮೆಲ್ಲರ ಗುರಿಯಾಗಿರಲಿ ಎಂದು ಚಿಂತಕಿ ರಜನಿ ಪಾಟೀಲ ಹೇಳಿದರು.
ಅವರು ಗುರುವಾರ ಗದಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಸರ್ಕಾರಿ ಶಾಲೆ ನಂ.4ರ ಶಾಲಾ ಸಿದ್ಧತಾ ಕೇಂದ್ರದಲ್ಲಿ ಜರುಗಿದ ವಿಶೇಷ ಚೇತನ ಮಕ್ಕಳು ಹಾಗೂ 21 ನ್ಯೂನತೆಗಳ ಕುರಿತು ಪಾಲಕರಿಗೆ ಹಾಗೂ ಶಾಲಾ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಜಾಗೃತಿ ಕರಪತ್ರ ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷ ಚೇತನ ಮಕ್ಕಳ ಬೆಳವಣಿಗೆಗೆ ಪೂರಕವಾದ ಪರಿಸರ ನಿರ್ಮಾಣ ಕಾರ್ಯ ನಡೆಯಬೇಕು. ಅರಿವಿನ ತೊಂದರೆಯುಳ್ಳ ಮಕ್ಕಳನ್ನು ಸಾಮಾನ್ಯ ಮಕ್ಕಳೊಂದಿಗೆ ಸೇರಿಸಿ ಕಲಿಕಾ ವಾತಾವರಣ ನಿರ್ಮಾಣ ಮಾಡುವ ಕಾರ್ಯ ನಿರಂತರ ನಡೆಯಲಿ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಗದಗ ಶಹರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಪ್ರಶಾಂತ ಕನಾಜ ಹಾಗೂ ಸಿದ್ಧಾರೂಢ ಕೆಳಗಿನಮನಿ ಮಾತನಾಡಿ, ಮಗುವಿನ ಬೆಳವಣಿಗೆಯಲ್ಲಿ ನಿರ್ದಿಷ್ಟ ಚಟುವಟಿಕೆಗಳಲ್ಲಿ ತನ್ಮಯತೆಯಿಂದ ತೊಡಗಿಸಕೊಳ್ಳುವುದು ಅತ್ಯಗತ್ಯ. ಆದರೆ ಹಲವಾರು ಕಾರಣಗಳಿಂದ ವಿಶೇಷ ಚೇತನ ಮಕ್ಕಳು ಹಿಂದೆ ಉಳಿಯುತ್ತಿದ್ದು, ಪಾಲಕರು ವಿಶೇಷ ಕಾಳಜಿ ವಹಿಸಬೇಕು ಎಂದರು.
ಸAಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ, ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಎಂ.ಬಿ. ಗಾಣಿಗ, ಪಾಲಕರ ಪರವಾಗಿ ಮಂಜುಳಾ ಸುಂಕದ, ಗೀತಾ ಗೋಕಾವಿ, ಶಬಾನಾ ನದಾಫ, ನಸರೀನ ಕರಡಿ ಮಾತನಾಡಿದರು. ವೇದಿಕೆಯ ಮೇಲೆ ಮುಖ್ಯೋಪಾಧ್ಯಾಯೆ ಭಾರತಿ ಮಟ್ಟಿ, ಅಂಗನವಾಡಿ ಕಾರ್ಯಕರ್ತೆ ಕವಿತಾ ಹುಣಸಿಮರದ ಉಪಸ್ಥಿತರಿದ್ದರು.
ಸಿಂಚನಾ ಗೋಕಾವಿ ಪ್ರಾರ್ಥಿಸಿದರು. ಶಿಕ್ಷಕಿ ಸುನೀತಾ ತಿಮ್ಮನಗೌಡ್ರ ಸ್ವಾಗತಿಸಿದರು. ಕಟಗಿ ಪರಿಚಯಿಸಿದರು. ಶಶಿಧರ ಚಳಗೇರಿ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಮಾಲನ್ ಹೊಸಳ್ಳಿ, ಪ್ರೇಮಾ ಅಂಗಡಿ, ಶ್ವೇತಾ ಪಾಟೀಲ, ಸಂಜನಾಬಾಯಿ ಟೀಕಾರೆ, ಗೀತಾ ಸವದತ್ತಿ, ನಾಸರಿನ್ ಮಕಾನದಾರ, ಅಂಜುಮಾ ತಹಸೀಲ್ದಾರ್ ಉಪಸ್ಥಿತರಿದ್ದರು.