ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಶಾಲಾ ಶಿಕ್ಷಣದಲ್ಲಿ ಸೃಜನಶೀಲ ಅಭಿವೃಕ್ತಿಯ ಅವಕಾಶಗಳು ಕಡಿಮೆ ಇರುವದರಿಂದ ಸಾಹಿತ್ಯ ಸೃಷ್ಟಿ ವಿದ್ಯಾರ್ಥಿಗಳಲ್ಲಿ ಸಾಧ್ಯವಾಗುತ್ತಿಲ್ಲ. ಮಕ್ಕಳು ಮೂಲತಃ ಸೃಜನಶೀಲರಾಗಿದ್ದು, ಸೂಕ್ತ ಅವಕಾಶಗಳನ್ನು ಕಲ್ಪಿಸುವ ಮೂಲಕ ಸುತ್ತಲಿನ ಸಂಗತಿಗಳನ್ನು ಲಿಖಿತವಾಗಿ ಹಾಗೂ ಮೌಖಿಕವಾಗಿ ವ್ಯಕ್ತಪಡಿಸುವ ಸನ್ನಿವೇಶಗಳನ್ನು ಕಮ್ಮಟದಿಂದ ಸೃಷ್ಟಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ತಿಳಿಸಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಷ್ಠಾನದ ಸಹಯೋಗದಲ್ಲಿ ಜರುಗಿದ ಎರಡು ದಿನಗಳ ಕತೆ ಹಾಗೂ ಕಾವ್ಯ ರಚನಾ ಕಮ್ಮಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಚರ್ಚೆ, ಸಂವಾದಗಳ ಮೂಲಕ ಪರಸ್ಪರ ಅನುಭವಗಳನ್ನು ಹಂಚಿಕೊಂಡು ಕತೆ ಮತ್ತು ಕವಿತೆಗಳನ್ನು ರಚಿಸಿದ ಪರಿಯನ್ನು ಗಮನಿಸಿದರೆ ಕಮ್ಮಟ ಯಶಸ್ವಿಯಾಗಿದೆ ಎಂಬುದು ವೇದ್ಯವಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಸುಭಾಸಚಂದ್ರ ಬೆಟದೂರ ಕಮ್ಮಟದಲ್ಲಿ ವಿದ್ಯಾರ್ಥಿಗಳು ರಚಿಸಿದ ಕವಿತೆಗಳ ಕರಡು ಸಂಕಲನ ‘ಮಿಂಚು’, ಕಥೆಗಳ ಕರಡು ಸಂಕಲನ ‘ನವಿಲುಗರಿ’ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಪಠ್ಯ-ಪುಸ್ತಕಗಳಲ್ಲಿಯೇ ಮುಳುಗಿರುವ ವಿದ್ಯಾರ್ಥಿಗಳಿಗೆ ಇಂತಹ ಕಮ್ಮಟಗಳಿಂದ ಮನೋವಿಕಾಸವಾಗಿ ಹೊಸ ಚಿಂತನೆಗಳಿಗೆ ದಾರಿ ಮಾಡಿಕೊಡುತ್ತವೆ. ಪ್ರತಿಭಾ ಸಂಪನ್ನರಾದ ಮಕ್ಕಳಿಗೆ ವೈವಿಧ್ಯಮಯ ಅವಕಾಶಗಳನ್ನು ಕಲ್ಪಿಸಿ ಅವರ ಬದುಕನ್ನು ಸುಂದರಗೊಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ತಿಳಿಸಿದರು.
ಕಮ್ಮಟದಲ್ಲಿ ಮಕ್ಕಳ ಬರವಣಿಗೆ ಪ್ರಗತಿ ಮತ್ತು ಸಾಧನೆ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ ನೆಲಜೇರಿ, ಭುವನೇಶ್ವರಿ ಅಂಗಡಿ, ಮಂಜುಳಾ ತುಮ್ಮರಮಟ್ಟಿ, ವಿನಾಯಕ ಕಮತದ ಮಾತನಾಡಿದರು.
ಹರ್ಷಿತಾ ಉಮಚಗಿ ಪ್ರಾರ್ಥಿಸಿದರು. ಡಿ.ಎಸ್. ಬಾಪುರಿ ಸ್ವಾಗತಿಸಿದರು. ಸತೀಶ ಚನ್ನಪ್ಪಗೌಡ ವಂದಿಸಿದರು. ಕಮ್ಮಟದಲ್ಲಿ 70ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.