ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಡಿತರ ವ್ಯವಸ್ಥೆಯಲ್ಲಿ ಜಾರಿಗೆ ತಂದಿರುವ ಹೊಸ ತಂತ್ರಾಂಶವು ಸಹ ಸರ್ವರ್ ಸಮಸ್ಯೆ ಎದುರಿಸುತ್ತಿದ್ದು, ಜನರು ನ್ಯಾಯಬೆಲೆ ಅಂಗಡಿಗಳ ಮುಂದೆ ಸರದಿಯಲ್ಲಿ ಕಾಯ್ದು ನಿಲ್ಲುವ ಶಿಕ್ಷೆ ಮಾತ್ರ ತಪ್ಪುತ್ತಿಲ್ಲ.
ಸರ್ವರ್ ಡೌನ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಹಾರ ಇಲಾಖೆ ಹೊಸದಾಗಿ ಅಳವಡಿಸಿರುವ ತಂತ್ರಾಂಶ ಪಡಿತರದಾರರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಹೊಸ ವ್ಯವಸ್ಥೆಯಲ್ಲೂ ತಂತ್ರಾಂಶ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ನ್ಯಾಯಬೆಲೆ ಅಂಗಡಿಗಳ ಎದುರು ಜನರು ಇಡೀ ದಿನ ಕಾದು ನಿಲ್ಲುವಂತಾಗಿದೆ.
ಇದು ತಾಲೂಕಿನ ಸಮಸ್ಯೆಯಷ್ಟೆ ಅಲ್ಲದೆ, ಬಹುತೇಕ ಎಲ್ಲೆಡೆ ಈ ಸಮಸ್ಯೆ ಕಂಡುಬರುತ್ತಿದೆ. ತಾಲೂಕಿನಾದ್ಯಂತ ಸುಮಾರು 32 ಪಡಿತರ ಅಂಗಡಿಗಳಿದ್ದು, ಇದರಲ್ಲಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ಗಳು ಸಾವಿರಾರು ಸಂಖ್ಯೆಯಲ್ಲಿವೆ. ನಿತ್ಯ ಸರ್ವರ್ ಸಮಸ್ಯೆ ಎಲ್ಲರನ್ನು ಕಾಡುತ್ತಿದೆ.
ತಾಲೂಕಿನ ಬಹುತೇಕ ಕಡೆ ಸರ್ವರ್ ಸಮಸ್ಯೆ ಎದುರಾಗಿದ್ದು, ಪ್ರತಿನಿತ್ಯ ನೂರಾರು ಜನರು ಬಯೋಮೆಟ್ರಿಕ್ ನೀಡಲು ನ್ಯಾಯಬೆಲೆ ಅಂಗಡಿಗಳ ಮುಂದೆ ತಮ್ಮ ದೈನಂದಿನ ಕೆಲಸ ಬಿಟ್ಟು ಸರದಿ ಸಾಲಲ್ಲಿ ನಿಲ್ಲಬೇಕಿದೆ.
ಇಷ್ಟಾದರೂ ದಿನಕ್ಕೆ ಕೇವಲ 5-6 ಕಾರ್ಡ್ಗಳಿಗೆ ಪಡಿತರ ದೊರಕಬೇಕಾದರೆ ಅಬ್ಬಾ ಎನ್ನುವಂತಾಗುತ್ತದೆ. ಉಳಿದವರು ಬಂದ ದಾರಿಗೆ ಸುಂಕ ಇಲ್ಲದಂತೆ ಮನೆಗೆ ವಾಪಸ್ ತೆರಳುತ್ತಿದ್ದಾರೆ. ಸರ್ವರ್ ಸಮಸ್ಯೆ ಯಾವಾಗ ಬಗೆಹರಿಯುತ್ತದೆ ಎಂಬ ಬಗ್ಗೆ ಇಲಾಖೆ ಅಧಿಕಾರಿಗಳಿಗೂ ಸ್ಪಷ್ಟ ಮಾಹಿತಿ ಇಲ್ಲ.
ಹಳೆಯ ಸರ್ವರ್ ಎನ್‌ಐಸಿ ಕಳೆದ ಹಲವಾರು ವರ್ಷಗಳಿಂದ ಸರ್ವರ್ ಸಮಸ್ಯೆ ಕಾಡುತ್ತಿತ್ತು. ಇದರಿಂದಾಗಿ ಪ್ರತಿ 3 ತಿಂಗಳಿಗೊಮ್ಮೆ ನ್ಯಾಯಬೆಲೆ ಅಂಗಡಿಗಳ ಮುಂದೆ ದೈನಂದಿನ ಕೆಲಸ ಬಿಟ್ಟು ಬಯೋಮೆಟ್ರಿಕ್ ಪಡೆದು ಆಹಾರ ಪದಾರ್ಥ ಪಡೆಯಲು ಹರಸಾಹಸ ಪಡುವಂತಾಗಿತ್ತು. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಸರ್ವರ್ ಸಮಸ್ಯೆ ಹೆಚ್ಚು ಕಾಡುತ್ತಿತ್ತು. ಈ ಎಲ್ಲ ಸಮಸ್ಯೆಗಳಿಗೂ ಪರಿಹಾರಕ್ಕಾಗಿ ಇಲಾಖೆ, ಕರ್ನಾಟಕ ರಾಜ್ಯ ಅಂಕಿ ಅಂಶಗಳ ಕೇಂದ್ರದ (ಕೆಎಸ್‌ಡಿಸಿ) ಸಹಯೋಗದಲ್ಲಿ ಹೊಸ ತಂತ್ರಾಂಶವನ್ನು ಕಾರ್ಯರೂಪಕ್ಕೆ ತಂದಿದೆ.
ಆದರೆ, ತಂತ್ರಾಂಶದಲ್ಲಿನ ತಾಂತ್ರಿಕ ತೊಂದರೆಯಿಂದ ಕಾರ್ಡ್ದಾರರ ಬೆರಳಚ್ಚು (ಬಯೋಮೆಟ್ರಿಕ್) ಸ್ವೀಕರಿಸುತ್ತಿಲ್ಲ. ಇದರಿಂದಾಗಿ ಕಳೆದ 8-10 ದಿನಗಳಿಂದ ಪಡಿತರ ಪಡೆಯಲು ಸಾಧ್ಯವಾಗದೆ ಕಾರ್ಡ್ದಾರರು ಪರದಾಡುವಂತಾಗಿದ್ದು, ಪಡಿತರ ಅಂಗಡಿಗಳ ಮುಂದೆ ಕೆಲಸ ಕಾರ್ಯ ಬಿಟ್ಟು ಕಾಯುತ್ತಾ ಕುಳಿತುಕೊಳ್ಳುವದರ ಜೊತೆ ಸರದಿ ಸಾಲಿಗಾಗಿ ಅಕ್ಕಿ, ಜೋಳ ಪಡೆಯಲು ತಂದಿರುವ ಚೀಲಗಳನ್ನು ಇಟ್ಟು ನೆರಳು ಅರಸಿಕೊಂಡು ಕುಳಿತುಕೊಳ್ಳುವಂತಾಗಿದೆ.
ಹೊಸ ಸರ್ವರ್ ಅಳವಡಿಸುವಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ರವಿವಾರ ಸಂಜೆಯಿಂದಲೇ ವೇಗವಾಗಿ ಸರ್ವರ್ ದೊರಕುತ್ತಿದೆ. ಅಲ್ಲದೆ ಸರ್ವರ್ ಸಮಸ್ಯೆ ಇದ್ದಾಗ ರಾತ್ರಿಯವರೆಗೂ ಪಡಿತರ ನೀಡಲಾಗಿದೆ. ಸೋಮವಾರದಿಂದ ಸರ್ವರ್ ಸಮಸ್ಯೆ ಬಗೆಹರಿದು ಯಾವುದೇ ತೊಂದರೆ ಇಲ್ಲದಂತೆ ಪಡಿತರ ವಿತರಣೆ ಮಾಡಲು ಮೇಲಾಧಿಕಾರಿಗಳು ಈಗಾಗಲೇ ಕ್ರಮ ಕೈಗೊಂಡಿದ್ದಾರೆ.
– ಜಗದೀಶ ಕುರುಬರ.
ತಾಲೂಕಾ ಆಹಾರ ನಿರೀಕ್ಷಣಾಧಿಕಾರಿ.