ಮೈಸೂರು ಜ 31: ಬಸವಣ್ಣನವರ ಆಶಯಗಳೆಲ್ಲಾ ನಮ್ಮ ಸಂವಿಧಾನದಲ್ಲಿ ಅಡಕವಾಗಿವೆ. ಇದನ್ನು ಇಡೀ ಸಮಾಜ ಅರಿತುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು. ಮೈಸೂರು ಸುತ್ತೂರಿನ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಗದ್ದುಗೆ ದರ್ಶನ ಪಡೆದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಜಾತ್ಯತೀತ ಸಮಾಜ ನಿರ್ಮಾಣ ಸಂವಿಧಾನದ ಮೂಲ ಉದ್ದೇಶ. ಶರಣಶ್ರೇಷ್ಠರಾದ ಬಸವಾದಿ ಶರಣರ ಆಶಯವೂ ಆಗಿದೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಬಸವಣ್ಣನವರ ಆಶಯದಂತೆ ಜಾತಿ, ಧರ್ಮದ ಹೆಸರಿನ ಮನುಷ್ಯ ತಾರತಮ್ಯ ಹಾಗೂ ಮೌಡ್ಯಗಳನ್ನು ತೊರೆಯಬೇಕು ಎಂದು ಕರೆ ನೀಡಿದರು.
ನಮಗೆ ಸಿಕ್ಕಿರುವ ರಾಜಕೀಯ ಸ್ವಾತಂತ್ರ್ಯ ಆರ್ಥಿಕವಾಗಿ, ಸಮಾಜಿಕವಾಗಿ ಇಲ್ಲ . ಇದು ಸಿಗದ ಹೊರತು ಸ್ವಾತಂತ್ರ್ಯದ ಆಶಯ ಪೂರ್ತಿ ಆಗುವುದಿಲ್ಲ ಎನ್ನುವ ಮಾತನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಜಾರಿ ಸಭೆಯಲ್ಲೇ ಹೇಳಿದ್ದರು. ಅವತ್ತಿನ ಅವರು ಮಾತು ಇವತ್ತಿಗೂ ಸತ್ಯ ಎಂದರು.
ಬಸವಣ್ಣನವರು 850 ವರ್ಷಗಳ ಹಿಂದೆ “ಇವ ನಾರವ ಎಂದು ಪ್ರಶ್ನಿಸದೆ, ಇವ ನಮ್ಮವ” ಎಂದು ಹೇಳಿ ಅಂದಿದ್ದರು. ಆದರೂ ಇವತ್ತಿಗೂ ನಾವು ಜಾತಿ ಕೇಳುವುದನ್ನು ನಿಲ್ಲಿಸಿಲ್ಲ, ಜಾತಿ-ಧರ್ಮದ ಅನಿಷ್ಠ ತಾರತಮ್ಯವನ್ನು ಇವತ್ತಿಗೂ ಕಾಣುತ್ತೇನೆ ಎಂದರು.
ನಾನು ವೈಯುಕ್ತಿಕವಾಗಿ ಬಸವಣ್ಣನವರ ಅಪ್ಪಟ ಹಿಂಬಾಲಕ. ಅದಕ್ಕೇ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಫೋಟೋ ಕಡ್ಡಾಯಗೊಳಿಸಿದೆ ಎಂದರು.
ವಿದ್ಯಾವಂತರೂ ಕರ್ಮಸಿದ್ಧಾಂತವನ್ನು ಆಚರಿಸುವ ದುರಂತವನ್ನು ನಾವು ಕಾಣುತ್ತೇವೆ. ಯಾವ ದೇವರೂ ಬಡವನಾಗಿರು, ಹಸಿದುಕೊಂಡಿರು, ಹರಿದ ಬಟ್ಟೆಯಲ್ಲಿರು ಎಂದು ಹಣೆಬರಹ ಬರೆಯುವುದಿಲ್ಲ. ಇಂಥಾ ಮೌಡ್ಯವನ್ನು ವಿದ್ಯಾವಂತರೂ ಆಚರಿಸುತ್ತಿದ್ದಾರೆ. ಹೀಗಾದಾಗ ಅವರ ವಿದ್ಯೆಗೆ ಗೌರವ ಬರುತ್ತದಾ ಎಂದು ಪ್ರಶ್ನಿಸಿದರು.
ಜಾತಿ ಆಧಾರದಲ್ಲಿ ಮನುಷ್ಯನ ಯೋಗ್ಯತೆ ಅಳೆಯುವ ಪದ್ಧತಿಯನ್ನು ನಮ್ಮ ಸಂವಿಧಾನ ವಿರೋಧಿಸಿತು. ಪ್ರತಿಭೆ ಮತ್ತು ಸಾಮರ್ಥ್ಯ ಪ್ರತಿಯೊಬ್ಬರ ಸ್ವತ್ತು. ಅವಕಾಶಗಳು ಸಿಗಬೇಕಷ್ಟೆ. ಅವಕಾಶ ಸಿಕ್ಕಾಗ ಎಲ್ಲರ ಪ್ರತಿಭೆಯೂ ಹೊರಗೆ ಬರುತ್ತವೆ. ಇದಕ್ಕೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂದರು.
ಸುತ್ತೂರು ಮಠ ಶಿಕ್ಷಣ ಮತ್ತು ಅನ್ನ ದಾಸೋಹ ನಡೆಸುತ್ತಾ ಇಡೀ ಸಮಾಜದ ಆಸ್ತಿಯಾಗಿದೆ. ಜಾತ್ಯತೀತ ಮೌಲ್ಯಗಳು ಸುತ್ತೂರು ಮಠದ ಮೌಲ್ಯಗಳೂ ಆಗಿವೆ ಎಂದರು.
ಕಾಯಕ ಮತ್ತು ದಾಸೋಹ ಎರಡೂ ಬಸವಾದಿ ಶರಣರ ಆಶಯವಾಗಿತ್ತು. ಕಾಯಕ ಅಂದ್ರೆ ಉತ್ಪತ್ತಿ, ದಾಸೋಹ ಅಂದರೆ ವಿತರಣೆ ಎಂದು ವಿಶ್ಲೇಷಿಸಿದರು.
ನಾವು ಉಚಿತವಾಗಿ ಅಕ್ಕಿ ಕೊಟ್ಟಿದ್ದರಿಂದ ಬಡವರು, ಶ್ರಮಿಕರು ಸೋಮಾರಿಗಳಾಗುತ್ತಿದ್ದಾರೆ ಎನ್ನುವುದು ದುಡಿಯದ ಗ್ರ ಮೈಗಳ್ಳರು, ದುಡಿಯದೆ ಬೊಜ್ಜು ಬೆಳೆಸಿಕೊಂಡವರು ಮಾತ್ರ ಹೇಳಲು ಸಾಧ್ಯ ಎಂದರು.
ಬರಿ ಬಾಯಿ ಮಾತಿನಲ್ಲಿ ಬಸವಣ್ಣ ಮತ್ತು ಅಂಬೇಡ್ಕರ್ ಅವರ ಆಶಯಗಳು ಜಾರಿ ಆಗುವುದಿಲ್ಲ. ಆಶಯಗಳಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಬೇಕು. ಈ ಉದ್ದೇಶದಿಂದಲೇ ನಾವು ಗ್ಯಾರಂಟಿಗಳನ್ನು ಜಾರಿಗೊಳಿಸಿದೆವು ಎಂದು ಕರೆ ನೀಡಿದರು.
ಆರ್ಥಿಕ, ಸಾಮಾಜಿಕ ಚಲನೆ ಸಿಕ್ಕಾಗ ಮಾತ್ರ ಜಾತಿ ವ್ಯವಸ್ಥೆ ಹೋಗಲು ಸಾಧ್ಯ. ನಮ್ಮ ಗ್ಯಾರಂಟಿಗಳು ಪ್ರತೀ ಬಡವ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಚಲನೆ ನೀಡಿವೆ. ಜನರ ಕೊಳ್ಳುವ ಶಕ್ತಿಯನ್ನು ನಾವು ಹೆಚ್ಚಿಸಿದ್ದರಿಂದಲೇ ರಾಜ್ಯದ ಆರ್ಥಿಕ ಪರಿಸ್ಥಿತಿ ಕೂಡ ಸದೃಢವಾಗಿದೆ ಎಂದರು.