ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮಠ-ಮಾನ್ಯಗಳಿಗೆ ಒಬ್ಬ ಕ್ರಿಯಾಶೀಲ ಮಠಾಧಿಪತಿ ಇದ್ದರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳೇ ಪ್ರತ್ಯಕ್ಷ ಉದಾಹರಣೆಯಾಗಿದ್ದಾರೆ. ಅವರ ಸಂಕಲ್ಪದಿಂದ ಇಂದು ನಿಡಗುಂದಿಕೊಪ್ಪದ ಶ್ರೀಮಠದಲ್ಲಿ ಗಜೇಂದ್ರಗಡ ತಾಲೂಕಿನ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದಲ್ಲಿ ನಡೆಯುತ್ತಿರುವ ಗಜೇಂದ್ರಗಡದ ಪ್ರಥಮ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.
ನಿಡಗುಂದಿ ಮತ್ತು ನಿಡಗುಂದಿಕೊಪ್ಪದ ಸರ್ವ ಸದ್ಭಕ್ತರ ಇಚ್ಛೆಯಂತೆ ಗಜೇಂದ್ರಗಡ ತಾಲೂಕಿನ ಪ್ರಥಮ ಸಮ್ಮೇಳನ ಇಲ್ಲಿ ನಡೆಯುತ್ತಿದೆ. ಇದಕ್ಕೆ ಸರ್ವಾಧ್ಯಕ್ಷರನ್ನಾಗಿ ಅತ್ಯಂತ ಸೂಕ್ತ ವ್ಯಕ್ತಿಯನ್ನು ಹಿರೆವಡೆಯರ ಗುರುಗಳನ್ನು ಆಯ್ಕೆ ಮಾಡಿದ ಆಯ್ಕೆ ಸಮಿತಿಯನ್ನು ತಾವು ಅಭಿನಂದಿಸುವದಾಗಿ ತಿಳಿಸಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಅಭಿನವ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿ, ವರ್ಷಕ್ಕೊಮ್ಮೆ ನಡೆಯುವ ಶ್ರೀ ಕುಮಾರೇಶ್ವರ ಜಾತ್ರೆಯ ಮುನ್ನಾದಿನ ಏನಾದರೊಂದು ಹೊಸ ಕಾರ್ಯಕ್ರಮವನ್ನು ಆಯೋಜಿಸುವ ಪದ್ಧತಿಯನ್ನು ಬಹಳ ವರ್ಷಗಳಿಂದಲೂ ಅನುಸರಿಸಿಕೊಂಡು ಬರಲಾಗಿದೆ. ಹೋದ ವರ್ಷ ರೈತರಿಗಾಗಿ ಕಾರ್ಯಕ್ರಮವನ್ನು ಮಾಡಿದ್ದೆವು. ಈ ಸಾರೆ ಹೊಳೆದದ್ದು ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರ. ಶಾಸಕರು, ಜಿಲ್ಲಾ ಕಸಾಪ ಪದಾಧಿಕಾರಿಗಳು ಮತ್ತು ತಾಲೂಕು ಪದಾಧಿಕಾರಿಗಳೊಂದಿಗೆ, ಸದ್ಭಕ್ತರೊಂದಿಗೆ ಚರ್ಚಿಸಿದಾಗ ಎಲ್ಲರೂ ಒಮ್ಮನದ ಸಮ್ಮತಿ ನೀಡಿದ್ದರಿಂದ ಈ ಕಾರ್ಯಕ್ಕೆ ಚಾಲನೆ ದೊರಕಿತು. ಇಂದು ನರೇಗಲ್ಲದ ಎಲ್ಲ ನಿವೃತ್ತ ಸೈನಿಕರು ಬಂದು ಈ ಧ್ವಜಾರೋಹಣವನ್ನು ಅವಿಸ್ಮರಣೀಯಗೊಳಿಸಿದ್ದಕ್ಕಾಗಿ ಎಲ್ಲರನ್ನೂ ಹೃದಯದುಂಬಿ ಆಶೀರ್ವದಿಸುವುದಾಗಿ ಶ್ರೀಗಳು ತಿಳಿಸಿದರು.
ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಪರಿಷತ್ ಧ್ವಜಾರೋಹಣ ನೆರವೇರಿಸಿದರೆ, ತಾಲೂಕಾ ಅಧ್ಯಕ್ಷ ಅಮರೇಶ ಗಾಣಿಗೇರ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ನಾಡಿನ ಅನೇಕ ಹರ-ಗುರು-ಚರ ಮೂರ್ತಿಗಳು, ಹೋಬಳಿ ಘಟಕದ ಅಧ್ಯಕ್ಷ ಎಂ.ವಿ. ವೀರಾಪೂರ, ಮಿಥುನ ಪಾಟೀಲ, ವಿ.ಬಿ. ಸೋಮನಕಟ್ಟಿಮಠ, ಅಂದಪ್ಪ ಬಿಚ್ಚೂರ, ಫಕೀರಪ್ಪ ಕುಕನೂರ, ಜಗದೀಶ ಕರಡಿ ಸೇರಿದಂತೆ ನಿಡಗುಂದಿಕೊಪ್ಪ, ನಿಡಗುಂದಿ, ಹಾಲಕೆರೆ, ನರೇಗಲ್ಲ ಮತ್ತು ತಾಲೂಕಿನ ಎಲ್ಲ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.
ತಮ್ಮ ಶ್ರೀಮಠದ ಜಾತ್ರೆಯೊಂದಿಗೆ ಕನ್ನಡ ನುಡಿ ಸೇವೆಯನ್ನು ತಾಲೂಕಾ ಸಮ್ಮೇಳನದ ರೂಪದಲ್ಲಿ ಏರ್ಪಡಿಸಿರುವುದು ಶ್ಲಾಘನೀಯ. ಅದಕ್ಕಾಗಿ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳನ್ನು, ನಿಡಗುಂದಿ ಮತ್ತು ನಿಡಗುಂದಿಕೊಪ್ಪದ ಸರ್ವ ಸದ್ಭಕ್ತರನ್ನು, ಸಕಲ ಕನ್ನಡಾಭಿಮಾನಿಗಳನ್ನು ಭಕ್ತಿಪೂರ್ವಕವಾಗಿ ಅಭಿನಂದಿಸುವದಾಗಿ ಶಾಸಕ ಜಿ.ಎಸ್. ಪಾಟೀಲ ಹೇಳಿದರು.