ಹಾಸನ: ನಗರದ ಅದಿದೇವತೆ ಹಾಸನಾಂಬೆಯ ದರ್ಶನಕ್ಕೆ ಸಾಗರೋತ್ಪಾದಿಯಲ್ಲಿ ಭಕ್ತರ ಸಂಖ್ಯೆ ಆಗಮಿಸುತ್ತಲೇ ಇದ್ದು, ದೇವಿಯ ದರ್ಶನಕ್ಕಾಗಿ ಕಿಲೋಮೀಟರ್ಗಟ್ಟಲೆ ಸರತಿ ಸಾಲು ನಿಂತಿದ್ದು ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಅಧಿಕಾರಿಗಳು ಹರಸಾಹಸ ಪಡುವಂತಾಗಿದೆ. ಇದೀಗ ಹಾಸನಾಂಬ ದೇಗುಲದಲ್ಲಿ ಭಕ್ತರ ದಟ್ಟಣೆಯಿಂದಾಗಿ 1000 ರೂಪಾಯಿ ನೇರ ದರ್ಶನ ಟಿಕೆಟ್ ಹಾಗೂ ವಿಐಪಿ ಪಾಸ್ ರದ್ದುಗೊಳಿಸಲಾಗಿದೆ.
ಹೌದು ಹಾಸನಾಂಬೆ ದೇವಾಲಯದ ಬಳಿ ಹಾಸನ ಎಸ್‌ಪಿ ಮಹಮ್ಮದ್ ಸುಜೀತಾ, ಕೊಡಗು ಎಸ್‌ಪಿ ರಾಮರಾಜ ಹಾಗೂ ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ್ ಮಾಲದಂಡಿಯವರನ್ನು ಜನರ ನಿಯಂತ್ರಣಕ್ಕೆ ನಿಯೋಜಿಸಲಾಗಿದೆ. ಆದರೂ ಹಾಸನಾಂಬೆ ದೇವಿ ದರ್ಶನಕ್ಕೆ ಲಕ್ಷಾಂತರ ಜನ ಭಕ್ತರು ಆಗಮಿಸಿದ್ದು ನಿಯಂತ್ರಣಕ್ಕೆ ಮೂವರು ಎಸ್‌ಪಿಗಳು ಪರದಾಡುವಂತಾಗಿದೆ.
ಹಾಸನಾಂಬೆ ದೇವಾಲಯ ಆಡಳಿತ ಮಂಡಳಿ ಬೇಕಾಬಿಟ್ಟಿಯಾಗಿ ವಿವಿಐಪಿ ಪಾಸ್ ಹಂಚಿದ್ದರಿಂದ ಈ ಯಡವಟ್ಟಾಗಿದೆ. ರಾಜ್ಯದ ಹಲವು ಜಿಲ್ಲೆಗಳ ಲಕ್ಷಾಂತರ ಪಾಸ್ ಹಂಚಿಕೆ ಮಾಡಿದ್ದರಿಂದ ಈ ಸಮಸ್ಯೆ ಎದುರಾಗಿದೆ.
ವಿವಿಐಪಿ ಪಾಸ್ ಪಡೆದು ನೇರ ದರ್ಶನದ ಆಸೆಯಲ್ಲಿ ಲಕ್ಷಾಂತರ ಜನ ಬಂದಿದ್ದಾರೆ. ಆದಾಯದ ಆಸೆಗೆ ಬೇಕಾಬಿಟ್ಟಿ ಪಾಸ್ ಹಂಚಿಕೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ದರ್ಶನಕ್ಕೆ ಬಂದ ಜನ ಪಾಸ್ ಇದೆ, ಬಿಡಿ ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. ಅಲ್ಲದೇ ಸಿಬ್ಬಂದಿ ಜೊತೆ ಗಲಾಟೆಗೂ ಮುಂದಾಗಿದ್ದಾರೆ. ಒಂದು ಭಾಗದಿಂದ ಜನರು ಹೋಗದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ.
ಇನ್ನು ರಾಜ್ಯದ ವಿವಿಧ ಮೂಲೆಗಳಿಂದ ಬೆಂಗಳೂರು, ತುಮಕೂರು, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹಾಸನಾಂಬೆ ದರ್ಶನಕ್ಕಾಗಿ ವಿಶೇಷ ಬಸ್ ಸಂಚಾರ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆದರೆ, ಇಂದು ಹಾಸನದಲ್ಲಿ ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ ಎಲ್ಲ ವಿಶೇಷ ಸಾರಿಗೆ ಬಸ್‌ಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.