ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಒಂದಲ್ಲ ಒಂದು ಕಾರಣಕ್ಕೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೆ ಇರುತ್ತಾರೆ. ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದ ಲಾಯರ್ ಜಗದೀಶ್ ಠಾಣೆ ಮೆಟ್ಟಿಲೇರಿದ್ದು ಇದೆ. ಇದೀಗ ಜಾತಿ ನಿಂದನೆ ಆರೋಪದ ಹಿನ್ನೆಲೆಯಲ್ಲಿ ಜಗದೀಶ್ ಅವರನ್ನು ಮತ್ತೆ ಪೊಲೀಸರು ಬಂಧಿಸಿದ್ದಾರೆ.
ಲಾಯರ್ ಜಗದೀಶ್ ವಿರುದ್ಧ ಮಂಜುನಾಥ್ ಎಂಬುವವರು ನೀಡಿದ್ದ ದೂರಿನ ಮೇರೆಗೆ ಎಫ್ಐಆರ್ ದಾಖಲು ಮಾಡಲಾಗಿತ್ತು. ಹೀಗಾಗಿ ಬೆಂಗಳೂರಿನ ಕೊಡಿಗೆಹಳ್ಳಿ ಠಾಣೆ ಪೊಲೀಸರು ಜಗದೀಶ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಲಾಯರ್ ಜಗದೀಶ್ ಅವರು ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಆಗಸ್ಟ್ 21 ಅವರಿಗೆ ನೋಟಿಸ್ ನೀಡಲು ತೆರಳಿದ್ದಾಗ ಮನೆಯ ಬಾಗಿಲು ತೆರೆಯದೇ ಹೈಡ್ರಾಮಾ ಮಾಡಿದ್ದರು.
ಪೊಲೀಸರಿಂದ ಬಂಧನಕ್ಕೆ ಒಳಗಾಗುವಾಗ ಜಗದೀಶ್ ಅವರು ಫೇಸ್ಬುಕ್ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದರು. ‘ಯಾರೂ ಅಶಾಂತಿ ಮಾಡಬೇಡಿ. ಇದು ಸಾಮಾನ್ಯ ಪ್ರಕ್ರಿಯೆ’ ಎಂದು ಹೇಳಿದ್ದಾರೆ. ಅಲ್ಲದೇ ಈ ವಿಡಿಯೋದಲ್ಲಿನ ಕ್ಯಾಪ್ಷನ್ನಲ್ಲಿ ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿರುವ ಅವರು, ‘ನಮಸ್ಕಾರ ಕರ್ನಾಟಕ. ಇಂದು ಕೊಡಿಗೆಹಳ್ಳಿ ಪೊಲೀಸರು ನನ್ನನ್ನು ವಶಕ್ಕೆ ಪಡೆದಿದ್ದಾರೆ. ನಾನು ಧರ್ಮಸ್ಥಳ ಅತ್ಯಾಖಂಡ ವಿರುದ್ಧ ಸತ್ಯವನ್ನು ಹೇಳಿದ್ದೇ ತಪ್ಪೇ ಸಮಾಜದಲ್ಲಿ ತಪ್ಪು ನಡೆದಾಗ ಧ್ವನಿ ಎತ್ತುವುದು ನಮ್ಮ ಸಂವಿಧಾನಿಕ ಹಕ್ಕು. ನ್ಯಾಯಕ್ಕಾಗಿ ಹೋರಾಡುವುದು ಅಪರಾಧವಲ್ಲ’ ಎಂದು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ.