ಚಿಕ್ಕೋಡಿ: ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ಸಮಯದಲ್ಲಿ ಗರ್ಭಿಣಿ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ. ಮುತ್ತವ್ವ ಸಂತೋಷ ಗೊಳಸಂಗಿ(೨೧) ಮೃತಪಟ್ಟ ಗರ್ಭಿಣಿಯಾಗಿದ್ದು, ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಅಥಣಿಯ ತಾಲೂಕಾಸ್ಪತ್ರೆಯಲ್ಲಿ ಘಟನೆ ನಡೆದಿದೆ.
ಮಹಿಳೆಗೆ ಇದೇ ತಿಂಗಳು 31ರಂದು ಹೆರಿಗೆ ದಿನಾಂಕವನ್ನು ನಿಗದಿ ಪಡಿಸಿದ್ದರು. ಆದರೆ ಕಳೆದ ಎರಡು ದಿನಗಳ ಹಿಂದೆ ಮಹಿಳೆ ಚೆಕ್ಆಪ್ಗೆ ಎಂದು ಅಥಣಿ ತಾಲ್ಲೂಕು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಮಹಿಳೆಯ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಮಹಿಳೆಯನ್ನು ತಾಲ್ಲೂಕಾಸ್ಪತ್ರೆಗೆ ದಾಖಲಿಸಿಕೊಂಡಿದ್ದರು.
ಈ ವೇಳೆ ಗರ್ಭಿಣಿಯ ಬಿಪಿಯಲ್ಲಿ ನಿರಂತರ ವ್ಯತ್ಯಾಸ ಕಂಡು ಬಂದ ಹಿನ್ನಲೆ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಲು ಮುಂದಾಗಿದ್ದರು. ಈ ವೇಳೆ ಮಹಿಳೆಗೆ ತೀವ್ರ ರಕ್ತಸ್ರಾವವಾಗಿದ್ದು.ಕೂಡಲೇ ತಾಲ್ಲೂಕು ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳು ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ನಿರಂತರ ರಕ್ತಸ್ರಾವದಿಂದ ಮಾರ್ಗಮಧ್ಯ ಮಹಿಳೆ ಸಾವನ್ನಪ್ಪಿದ್ದಾರೆ.
ಕೊನೆಯುಸಿರೆಳೆಯುವ ಮುನ್ನ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು. ವೈದ್ಯರ ನಿರ್ಲಕ್ಷ ಎಂದು ಆರೋಪಿಸಿದ್ದಾರೆ. ಬಾಣಂತಿಯ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.