ಬೆಂಗಳೂರು: ಅಕ್ರಮ ಬಾಂಗ್ಲಾದೇಶ ವಲಸಿಗರನ್ನು ಪತ್ತೆ ಮಾಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಕ್ಕೆ ಪೊಲೀಸರೇ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಡಾ. ನಾಗೇಂದ್ರಪ್ಪ ಎಂಬವರು ವಿಧಾನಸೌಧದ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಘಟನೆ ವೇಳೆ ಸ್ಥಳದಲ್ಲಿದ್ದ ವಿಧಾನಸೌಧ ಪೊಲೀಸ್ ಸಿಬ್ಬಂದಿ ತಕ್ಷಣ ಸ್ಪಂದಿಸಿ, ವಿಷದ ಬಾಟಲಿಯನ್ನು ಕಿತ್ತುಕೊಂಡು ಡಾ. ನಾಗೇಂದ್ರಪ್ಪ ಅವರನ್ನು ತುರ್ತುವಾಗಿ ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ವೈದ್ಯರ ಮಾಹಿತಿ ಪ್ರಕಾರ, ಡಾ. ನಾಗೇಂದ್ರಪ್ಪ ಅವರ ಸ್ಥಿತಿ ಗಂಭೀರವಾಗಿದ್ದು, ತೀವ್ರ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.
ಡಾ. ನಾಗೇಂದ್ರಪ್ಪ ಹಾಗೂ ಪುನೀತ್ ಕೆರೆಹಳ್ಳಿ ಅವರು ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾದೇಶ ಮೂಲದ ವಲಸಿಗರನ್ನು ಪತ್ತೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರು ಎನ್ನಲಾಗಿದೆ.
ಆದರೆ ಈ ಹಿನ್ನಲೆಯಲ್ಲಿ ದೂರು ನೀಡಿದವರ ವಿರುದ್ಧವೇ ಪ್ರಕರಣ ದಾಖಲಾಗಿದ್ದು, ನಂತರ ಸೂಲದೇವನಹಳ್ಳಿ ಪೊಲೀಸರಿಂದ ನಿರಂತರ ಕಿರುಕುಳ ಅನುಭವಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಪೊಲೀಸರ ಕಿರುಕುಳದಿಂದ ಮನನೊಂದ ಡಾ. ನಾಗೇಂದ್ರಪ್ಪ ಅವರು ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.



