ಬೆಂಗಳೂರು: MSIL ಚಿಟ್ ಫಂಡ್ ಸಂಸ್ಥೆಯ ಕಚೇರಿಯಲ್ಲಿ ಮಹಿಳಾ ಉದ್ಯೋಗಿಯೊಬ್ಬರಿಗೆ ಅಧಿಕಾರಿಗಳು ದೌರ್ಜನ್ಯ ಹಾಗೂ ಕಿರುಕುಳ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಮೂವರು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಆರೋಪಿತರಾಗಿ MSIL ಜನರಲ್ ಮ್ಯಾನೇಜರ್ ಚಂದ್ರಶೇಖರ್, ಡೆಪ್ಯುಟಿ ಮ್ಯಾನೇಜರ್ ನಳಿನಿ ಹಾಗೂ ವೀಣಾ ಅವರ ವಿರುದ್ಧ ಬೆಂಗಳೂರು ಪಶ್ಚಿಮ ಡಿಸಿಆರ್ಇ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಮಹಿಳೆ ಕಳೆದ 8 ವರ್ಷಗಳಿಂದ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಚೆಕ್ಬುಕ್ ಕಾಣೆಯಾಗಿರುವುದನ್ನು ನೆಪ ಮಾಡಿಕೊಂಡು, ಅದನ್ನು ಹುಡುಕುವ ವಿಚಾರದಲ್ಲಿ ಮಹಿಳೆಯನ್ನು ವಿಚಾರಣೆಗಾಗಿ ಕಚೇರಿಗೆ ಕರೆಸಲಾಗಿದೆ ಎಂದು ಆರೋಪಿಸಲಾಗಿದೆ.
ಆದರೆ ವಿಚಾರಣೆ ಹೆಸರಿನಲ್ಲಿ ಸಂಜೆ 6 ಗಂಟೆಯಿಂದ ನಿರಂತರ ಕಿರುಕುಳ ನೀಡಲಾಗಿದ್ದು, ಕಳ್ಳತನದ ಆರೋಪ ಹೊರಿಸಲಾಗಿದೆ ಎಂದು ಮಹಿಳೆ ದೂರಿದ್ದಾರೆ.
ಮಹಿಳೆಯ ಹೇಳಿಕೆಯ ಪ್ರಕಾರ, ಸೆಕ್ಯೂರಿಟಿ ಕೊಠಡಿಗೆ ಕರೆದೊಯ್ದು ಆಕೆಯ ಇಚ್ಛೆಗೆ ವಿರುದ್ಧವಾಗಿ ಅವಮಾನಿಸಲಾಗಿದೆ ಹಾಗೂ ರಾತ್ರಿ 8 ಗಂಟೆಯವರೆಗೆ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಜೊತೆಗೆ ಜಾತಿ ನಿಂದನೆ ಮತ್ತು ಬೆದರಿಕೆ ಕೂಡ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
“ತಾವು ಹೇಳಿದಂತೆ ನಡೆದುಕೊಳ್ಳದಿದ್ದರೆ ಕೆಲಸದಲ್ಲಿ ಮುಂದುವರಿಯಲು ಅವಕಾಶ ನೀಡುವುದಿಲ್ಲ” ಎಂದು ಬೆದರಿಕೆ ಹಾಕಲಾಗಿದೆ ಎಂಬುದೂ ಆರೋಪದಲ್ಲಿ ಉಲ್ಲೇಖವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.



