ಗದಗ: ಗದಗನ ಬೆಟಗೇರಿಯ ನಾಡ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದ್ದು, ಅನರ್ಹ ಫಲಾನುಭವಿಗಳಿಗೆ ವಿವಿಧ ಸರ್ಕಾರಿ ಯೋಜನೆಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಬೆಟಗೇರಿ ನಾಡಕಚೇರಿ ಉಪ ತಹಸೀಲ್ದಾರ್ ಡಿ ಟಿ ವಾಲ್ಮೀಕಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ತಹಸೀಲ್ದಾರ್ ಕಚೇರಿಗೆ ಕಾನೂನು ಸಚಿವ ಎಚ್.ಕೆ. ಪಾಟೀಲ್ ದಿಢೀರ್ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದ ವೇಳೆ ದಾಖಲೆ ಸಮೇತ ಉಪ ತಹಸೀಲ್ದಾರ್ ಡಿ.ಟಿ. ವಾಲ್ಮೀಕಿ ಸಿಕ್ಕಿ ಬಿದ್ದಿದ್ದಾರೆ. ಸಚಿವರ ಸೂಚನೆಯಂತೆ ಗದಗ ಡಿಸಿ ಸಿ.ಎನ್. ಶ್ರೀಧರ್ ತಕ್ಷಣವೇ ಉಪ ತಹಸೀಲ್ದಾರ್ ಅವರನ್ನು ಅಮಾನತು ಮಾಡುವ ಆದೇಶ ಹೊರಡಿಸಿದ್ದಾರೆ.

ಗಂಡ ಇದ್ದರೂ ವಿಧವಾ ವೇತನ ಮಂಜೂರು, 30 ವರ್ಷದ ಯುವಕರಿಗೆ ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ಹಲವು ಅಕ್ರಮ ಮಂಜೂರಾತಿ ಮಾಡಲಾಗಿದ್ದು, ಜುಲೈದಿಂದ ಇಲ್ಲಿವರೆಗೂ 500 ಕ್ಕೂ ಹೆಚ್ಚು ಅಕ್ರಮ ದಾಖಲೆ ಸಮೇತ ಸಿಕ್ಕಾಕಿಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್, ನನಗೆ ದೂರು ಬಂದ ಹಿನ್ನಲೆಯಲ್ಲಿ ಗದಗ ತಹಸೀಲ್ದಾರ್ ಶ್ರೀನಿವಾಸ್ ಕುಲಕರ್ಣಿಗೆ ತನಿಖೆ ನಡೆಸುವಂತೆ ಸೂಚಿಸಿದ್ದೆ. ತನಿಖೆಯಲ್ಲಿ ಅನರ್ಹರಿಗೆ ಯೋಜನೆ ನೀಡಿರುವುದು ಬಯಲಾಗಿದೆ. ಹೀಗಾಗಿ ಉಪ ತಹಸೀಲ್ದಾರ್ ಡಿ.ಟಿ. ವಾಲ್ಮೀಕಿಯನ್ನು ಅಮಾನತುಗೊಳಿಸಲಾಗಿದೆ. ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ಡಿಸಿ, ಎಸ್ಪಿಗೆ ಸೂಚಿಸಲಾಗಿದೆ. ವರದಿ ಬಂದ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇನ್ನೂ ಕಾನೂನು ಸಚಿವ ಎಚ್.ಕೆ. ಪಾಟೀಲ್ ದಿಢೀರ್ ಭೇಟಿ, ಉಪ ತಹಸೀಲ್ದಾರ್ ಡಿ ಟಿ ವಾಲ್ಮೀಕಿ ಸಸ್ಪೆಂಡ್ ಎಲ್ಲಾವೂ ಭ್ರಷ್ಟಾಚಾರದಲ್ಲಿ ಸಿಲುಕಿದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಏಜಂಟರಿಗೆ ಢವಢವ ಶುರುವಾಗಿದೆ ಎನ್ನಲಾಗಿದ್ದು, ಯೋಜನೆಯ ಲಾಭ ಪಡೆದವರಿಗೂ ಆತಂಕ ಶುರುವಾಗಿದೆ ಎನ್ನಲಾಗಿದೆ.



