ಬೆಂಗಳೂರು: ಕಗ್ಗದಾಸಪುರದಲ್ಲಿ ನಡೆದ ಬೀದಿ ನಾಯಿಗಳ ಮೇಲಿನ ಕ್ರೌರ್ಯದ ಆರೋಪ ಗಂಭೀರ ವಿವಾದಕ್ಕೆ ಕಾರಣವಾಗಿದೆ. ಡಿಆರ್‌ಡಿಒ ಸಂಕೀರ್ಣದಲ್ಲಿ ನಾಯಿಗಳನ್ನು ಚೀಲಗಳಲ್ಲಿ ಕಟ್ಟಿ ಸಾಗಿಸಿದ ಘಟನೆ ಪ್ರಾಣಿ ಹಕ್ಕುಗಳ ಉಲ್ಲಂಘನೆಯಾಗಿ ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಈ ಘಟನೆ ವಿರುದ್ಧ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ನಟಿ ರಮ್ಯಾ ದಿವ್ಯ ಸ್ಪಂದನ ಸೇರಿದಂತೆ ಹಲವು ಶ್ವಾನ ಪ್ರಿಯರು ಭಾಗವಹಿಸಿ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಮಾತನಾಡುವ ವೇಳೆ ರಮ್ಯಾ ಭಾವುಕರಾಗಿ ಕಣ್ಣೀರು ಹಾಕಿದರು.
“ಇಂತಹ ಅಮಾನವೀಯ ಘಟನೆಗಳು ಸಹಿಸಲಾಗದು. ನಾಪತ್ತೆಯಾಗಿರುವ ನಾಯಿಗಳ ಬಗ್ಗೆ ತಕ್ಷಣ ಸ್ಪಷ್ಟತೆ ನೀಡಬೇಕು,” ಎಂದು ಅವರು ಆಗ್ರಹಿಸಿದರು.
ಸುಮಾರು 20ಕ್ಕೂ ಹೆಚ್ಚು ನಾಯಿಗಳು ಕಾಣೆಯಾಗಿರುವುದಾಗಿ ವರದಿಯಾಗಿದೆ. ಅನಿಮಲ್ ಬರ್ಥ್ ಕಂಟ್ರೋಲ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂಬ ಆಗ್ರಹ ಹೆಚ್ಚುತ್ತಿದೆ. ಸಿ.ವಿ. ರಾಮನ್ ನಗರ ಅನಿಮಲ್ ಸ್ಕ್ವಾಡ್ ಮತ್ತು ಪ್ರಿಯಾ ಚೆಟ್ಟಿ ರಾಜಗೋಪಾಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರಕರಣ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ವಿಷಯ ಈಗ ಕರ್ನಾಟಕ ಹೈಕೋರ್ಟ್‌ನ ವಿಚಾರಣೆಯಲ್ಲಿದೆ. ಮುಂದಿನ ವಿಚಾರಣೆ ಏಪ್ರಿಲ್ 16ರಂದು ನಡೆಯಲಿದೆ.



