ದೇವನಹಳ್ಳಿ:- ತಾಲೂಕಿನ ಪುಟ್ಟಯ್ಯನ ಅಗ್ರಹಾರ ಗ್ರಾಮದಲ್ಲಿ ಅಕ್ರಮ ಸಂಬಂಧ ಹಿನ್ನೆಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಚ್ಚಿ ಯುವಕನ ಕೊಲೆ ಮಾಡಲು ಯತ್ನಿಸಿರುವ ಘಟನೆ ಜರುಗಿದೆ.
ಕಾರ್ತಿಕ್ (26) ಹಲ್ಲೆಗೊಳಗಾದ ಯುವಕ. ಹಲ್ಲೆ ವೇಳೆ ಬಿಡಿಸಲು ಹೋದ ಯುವಕನ ತಂದೆ ಮಧುಸೂದನ್ ಅವರ ಮೇಲೂ ದಾಳಿ ನಡೆದಿದೆ.
ದೀಪಾ ಎಂಬ ಮಹಿಳೆ ಜೊತೆಯಲ್ಲಿ ಕಾರ್ತಿಕ್ ಅಕ್ರಮ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದ್ದು, ಇದೇ ವಿಚಾರವಾಗಿ ಈ ಹಿಂದೆ ಜಗಳ ನಡೆದಿತ್ತು. ವಿಷಯ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಹತ್ತಿತ್ತು. ಆ ವೇಳೆ ಪೊಲೀಸರು ರಾಜಿ ಸಂಧಾನ ಮಾಡಿ ಕಳುಹಿಸಿದ್ದರು. ಈ ನಡುವೆ ಮಹಿಳೆಯೇ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿಸಿದ್ದಾಳೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಘಟನೆ ವೇಳೆ ಗ್ರಾಮಸ್ಥರ ಮಧ್ಯ ಪ್ರವೇಶದಿಂದಾಗಿ ಕಾರ್ತಿಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುವಿಗೆ ದೊಡ್ಡಬಳ್ಳಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.



