ಹಾವೇರಿ:- ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಓರ್ವ ಶಿಕ್ಷಕನಿಗೆ ಸ್ಥಳೀಯರು ಮತ್ತು ಪೋಷಕರು ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿರುವ ಘಟನೆ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಜರುಗಿದೆ.

ಎಸ್, ಈ ಆಘಾತಕಾರಿ ಘಟನೆ ಸವಣೂರಿನ ಸರ್ಕಾರಿ ಉರ್ದು ಉನ್ನತೀಕರಿಸಿದ ಶಾಲೆಯಲ್ಲಿ ನಡೆದಿದೆ. ಶಾಲೆಯ ಶಿಕ್ಷಕ ಜಗದೀಶ್ ವಿರುದ್ಧ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಶಿಕ್ಷಕನ ಈ ಹೇಯ ಕೃತ್ಯ ತಿಳಿದು ತೀವ್ರ ಆಕ್ರೋಶಗೊಂಡ ಪೋಷಕರು ಮತ್ತು ಸ್ಥಳೀಯ ಸಾರ್ವಜನಿಕರು ಶಾಲಾ ಆವರಣಕ್ಕೆ ಧಾವಿಸಿದ್ದಾರೆ.

ಅಲ್ಲದೇ ಆರೋಪಿ ಶಿಕ್ಷಕ ಜಗದೀಶ್‌ನನ್ನು ಹಿಡಿದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಧರ್ಮದೇಟು ಕೊಟ್ಟಿದ್ದಾರೆ. ಶಾಲೆ ಆವರಣದಿಂದಲೇ ಶಿಕ್ಷಕನಿಗೆ ಹೊಡೆಯುತ್ತಾ, ಚಪ್ಪಲಿ ಹಾರ ಹಾಕಿ ಪಟ್ಟಣದಲ್ಲಿ ಮೆರವಣಿಗೆ ಮಾಡಿ, ಬಳಿಕ ಸವಣೂರು ಪೊಲೀಸ್ ಠಾಣೆಯವರೆಗೆ ಕರೆದುಕೊಂಡು ಬಂದಿದ್ದಾರೆ. ಶಿಕ್ಷಕ ಜಗದೀಶಗೆ ತಕ್ಕ ಶಿಕ್ಷೆಯಾಗಬೇಕು ಅಂತ ಈ ವೇಳೆ ಆಗ್ರಹಿಸಿದ್ದಾರೆ.
ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.
ಈ ಕುರಿತು ಮಾತನಾಡಿದ ಅಂಜುಮನ್ ಕಮಿಟಿ ಮುಖಂಡ ಡಾ.ಸಲೀಂ , ಶಿಕ್ಷಕನ ವರ್ತನೆಯಿಂದ ಬೇಸತ್ತು ಸಾರ್ವಜನಿಕರು ಹಾಗೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಬಾಲಕಿಯೊಬ್ಬಳಿಗೆ ಹೊಟ್ಟೆ ನೋವು, ಜ್ವರ ಬಂದಿತ್ತು. ಬಾಲಕಿಯನ್ನು ವಿಚಾರಿಸಿದಾಗ ಜಗದೀಶ್ ದೌರ್ಜನ್ಯ ಮಾಡಿರುವುದು ಗೊತ್ತಾಗಿದೆ. ಈ ಬಗ್ಗೆ ವಿಚಾರಿಸಿದಾಗ 7 ಬಾಲಕಿಯರ ಮೇಲೆ ಆತ ದೌರ್ಜನ್ಯ ಎಸಗಿರೋ ಮಾಹಿತಿ ಗೊತ್ತಾಗಿದೆ.
ಈ ಬಗ್ಗೆ ಕೇಳಿದರೆ ಆತ ನಾನು ಒಬ್ಬ ಬಾಲಕಿ ಮೇಲೆ ಮಾತ್ರ ಮಾಡಿದ್ದೀನಿ, 7 ಜನರ ಮೇಲೆ ಅಲ್ಲ ಎಂದ. ಹೀಗಾಗಿ ಜನ ರೊಚ್ಚಿಗೆದ್ದು ಹೊಡೆದು ಮೆರವಣಿಗೆ ಮಾಡಿದ್ದಾರೆ. ಪೋಕ್ಸೋ ಪ್ರಕರಣ ದಾಖಲಾಗಲೇಬೇಕು.ಈ ಬಗ್ಗೆ ಶಾಲೆ ಹೆಡ್ ಮಾಸ್ಟರ್, ಹಾಗೂ ಅಧಿಕಾರಿಗಳಿಗೆ ದೂರು ನೀಡಿದ್ದೇವೆ.
ಇಲಾಖೆಯವರೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಬಾಲಕಿಯರ ಪೋಷಕರು ಯಾರೂ ದೂರು ನೀಡೋದಿಲ್ಲ. ಇಲಾಖೆ ಅಧಿಕಾರಿಗಳೇ ಶಿಕ್ಷಕನ ಮೇಲೆ ದೂರು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.



