ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದೆ.
ಶಾಲೆಯ ಮಾಲೀಕ ಧನಂಜಯ್ ಮತ್ತು ಅವರ ಪತ್ನಿ ಶೈಲಜಾ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರೀಕ್ಷೆಗಾಗಿ ವಸತಿ ಶಾಲೆಯಲ್ಲಿ ಉಳಿದಿದ್ದ ಇಬ್ಬರು ಬಾಲಕಿಯರಿಗೆ, ಧನಂಜಯ್ ಮದ್ಯದ ಅಮಲಿನಲ್ಲಿ ರಾತ್ರಿವೇಳೆ ಕೊಠಡಿಗೆ ಹೋಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಬಾಲಕಿಯರು ಈ ವಿಚಾರವನ್ನು ಪತ್ನಿ ಶೈಲಜಾಗೆ ತಿಳಿಸಿದರೂ, ಆಕೆಯು ಗಂಡನ ಕ್ರೂರ ಕೃತ್ಯಕ್ಕೆ ಸಾಥ್ ನೀಡಿ, ಯಾವುದೇ ಸುದ್ದಿ ಹೊರಬಾರದಂತೆ ಒತ್ತಡ ಹಾಕುತ್ತಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.
ಇದೇ ನರಕದಲ್ಲಿ ಬೇಯುತ್ತಿದ್ದ ಬಾಲಕಿಯರ ಮೇಲೆ ಒತ್ತಡ ಹೇರಿದ್ದ ದಂಪತಿ, ವಸತಿ ಶಾಲೆಯಲ್ಲಿ ನಡೆದ ದೌರ್ಜನ್ಯದ ಕುರಿತು ಯಾರ ಬಳಿಯೂ ಹೇಳದಂತೆ ಒತ್ತಡ ಹೇರುತ್ತಿದ್ದರು. ಅದರಲ್ಲಿಯೂ ಪಾಲಕರಿಗೆ ಸುದ್ದಿ ಮುಟ್ಟಿಸಬಾರದೆಂದು ಸತತ 8 ದಿನ ಹೊರಗೆ ಹೋಗಲೂ ಬಿಡದೆ, ಪೋಷಕರಿಗೆ ಕರೆ ಮಾಡಲೂ ಬಿಡದೆ ಕಿರುಕುಳ ನೀಡಿದ್ದರು ಎಂದು ಬಾಲಕಿಯರು ಹೇಳಿದ್ದಾರೆ. ಅದಾದ ಬಳಿಕ ನಿನ್ನೆ ಪೋಷಕರಿಗೆ ಕರೆ ಮಾಡಿದ ಬಾಲಕಿಯರು ತಮ್ಮ ಮೇಲಾದ ದೌರ್ಜನ್ಯವನ್ನು ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೆ ಶಾಲೆ ಬಳಿ ಬಂದ ಬಾಲಕಿಯರ ಪೋಷಕರು ದಂಪತಿ ವಿರುದ್ಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ವಸತಿ ಶಾಲೆಯಲ್ಲಿ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಧನಂಜಯ್ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷರಾಗಿದ್ದು, ಕುಕೃತ್ಯದಿಂದ ನೊಂದ ಬಾಲಕಿಯರಿಗೆ ಪತ್ನಿ ಸಹ ತಾಕೀತು ನೀಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಸಧ್ಯಕ್ಕೆ ಇವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.



