ನಗರಸಭೆ ಅಧ್ಯಕ್ಷರ ಚುನಾವಣೆ ವಿಳಂಬ ಆರೋಪ: ಬಿಜೆಪಿ ಸದಸ್ಯರಿಂದ ಪ್ರತಿಭಟನೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರಸಭೆಯ ಎರಡನೇ ಅವಧಿಗೆ ನಡೆಯಬೇಕಿದ್ದ ಅಧ್ಯಕ್ಷರ ಚುನಾವಣೆಯಲ್ಲಿ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ನಗರಸಭೆ ಸದಸ್ಯರಿಂದ ನಗರದ ಉಪವಿಭಾಗಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಕಳೆದ ಆರು ತಿಂಗಳಿನಿಂದ ನಗರಸಭೆ ಅಧ್ಯಕ್ಷರ ಚುನಾವಣೆ ನಡೆದಿಲ್ಲ ಎಂದು ಎಸಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಕಾನೂನು ಸಚಿವ ಡಾ. ಎಚ್.ಕೆ. ಪಾಟೀಲರ ತವರೂರಲ್ಲಿ ಕಾನೂನು ಉಲ್ಲಂಘನೆ ಆಗುತ್ತಿದೆ ಎಂದು ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ನಗರಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿರುವ ಹಿನ್ನೆಲೆಯಲ್ಲಿ ದ್ವೇಷಪೂರಿತ ರಾಜಕಾರಣ ಮಾಡಲಾಗುತ್ತಿರುವುದು ಅವಳಿ ನಗರದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದಾಗಿ ನಗರದಲ್ಲಿ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಚುನಾವಣೆಯ ದಿನಾಂಕ ಘೋಷಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ, ಮೊದಲ ಅವಧಿಯ ಅಧ್ಯಕ್ಷ ಸ್ಥಾನ ಮುಗಿದು ಆರು ತಿಂಗಳು ಗತಿಸಿವೆ. ಆದರೆ, ಉಪವಿಭಾಗಾಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ನಗರಸಭೆ ಸದಸ್ಯರು ನಾಮಕಾವಸ್ತೆಗೆ ಸದಸ್ಯರಾಗಿದ್ದಾರೆ. ಈ ಭಾಗದ ಶಾಸಕರು ಕೇವಲ ಗ್ರಾಮಿಣ ಭಾಗದ ಶಾಸಕರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಜನವರಿ 10, 2025ರಂದು ಕೊರ್ಟ್ ಆದೇಶ ಹಾಗೂ ಡಿಸಿ ಮನವಿಯನ್ನು ಎಸಿ ಅವರಿಗೆ ನೀಡಿದ್ದೇವೆ. ಆದರೂ ಎಸಿ ಚುನಾವಣೆ ನಡೆಸದೇ ರಾಜಕಾರಣಿಯಾಗಿ ಕೆಲಸ ಮಾಡುತ್ತಿದ್ದಾರೆ. ನಿಯಮದಂತೆ ಅತೀ ಜರೂರಾಗಿ ಚುನಾವಣೆ ನಡೆಸಬೇಕು ಎಂದಿದ್ದರೂ ವಿನಾಕಾರಣ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ, ಸದಸ್ಯರಾದ ಅನಿಲ ಅಬ್ಬಿಗೇರಿ, ಪ್ರಕಾಶ್ ಅಂಗಡಿ, ಚಂದ್ರಶೇಖರ ತಡಸದ, ವಿನಾಯಕ ಮಾನ್ವಿ, ವಿಜಯಲಕ್ಷ್ಮೀ ದಿಂಡೂರ್, ಶ್ವೇತಾ ದಂಡಿನ್, ಲಕ್ಮೀ ಕಾಕಿ, ವಿದ್ಯಾವತಿ ಗಡಗಿ, ಮುತ್ತಣ್ಣ ಮುಸಿಗೇರಿ, ಮುಖಂಡರಾದ ಎಂ.ಎಸ್. ಕರಿಗೌಡ್ರ, ಜಿಲ್ಲಾಧ್ಯಕ್ಷ ರಾಜು ಕುರಡಗಿ, ಮಹೇಶ್ ದಾಸರ, ಸುಧೀರ್ ಕಾಟಿಗರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಹೈಕೋರ್ಟ್ನ ಅಧಿಕೃತ ಆದೇಶದ ಪತ್ರ ನನ್ನ ಕಚೇರಿಗೆ ಇನ್ನೂ ತಲುಪಿಲ್ಲ. ಭಾರತೀಯ ಜನತಾ ಪಕ್ಷದ ಸದಸ್ಯರು ಆದೇಶದ ಪ್ರತಿಯನ್ನು ಜನವರಿ 10ರಂದು ನೀಡಿದ್ದಾರೆ. ಅದರ ಆಧಾರದ ಮೇಲೆ ನಗರಸಭೆಯ ಅಧ್ಯಕ್ಷರ ಚುನಾವಣೆಯ ಮತದಾರರ ಪಟ್ಟಿಯನ್ನು ನೀಡುವಂತೆ ಪೌರಾಯುಕ್ತರಿಗೆ ಈಗಾಗಲೇ ಸೂಚಿಸಿದ್ದು, ಫೆಬ್ರುವರಿ 2ನೇ ವಾರದಲ್ಲಿ ನಗರಸಭೆ ಅಧ್ಯಕ್ಷರ ಚುನಾವಣೆ ನಡೆಯಲಿದೆ.

– ಗಂಗಪ್ಪ ಎಂ.

ಉಪವಿಭಾಗಾಧಿಕಾರಿ, ಗದಗ.


Spread the love

LEAVE A REPLY

Please enter your comment!
Please enter your name here