ಬೆಂಗಳೂರು: ವರ್ತೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಯೋಗಾನಂದ್ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ರೌಡಿಶೀಟರ್ ಗ್ಯಾಂಗ್ ಜೊತೆ ಶಾಮೀಲಾಗಿ ಕೊಲೆ ಪ್ರಕರಣದ ತನಿಖೆಗೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪದಡಿ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
2024ರ ಸೆಪ್ಟೆಂಬರ್ 18ರಂದು ತಮಿಳುನಾಡಿನ ಬಾಗಲೂರಿನಲ್ಲಿ ನಡೆದ ರೇವಂತ್ ಹತ್ಯೆ ಪ್ರಕರಣದಲ್ಲಿ ಈ ಆರೋಪಗಳು ಕೇಳಿಬಂದಿವೆ. 24 ವರ್ಷದ ಎಲ್ ಎಲ್ ಬಿ ವಿದ್ಯಾರ್ಥಿ ರೇವಂತ್ ಅವರನ್ನು ರೌಡಿಶೀಟರ್ ರೇವಾ ಮತ್ತು ಗ್ಯಾಂಗ್ ಸದಸ್ಯರು ಭೀಕರವಾಗಿ ಹತ್ಯೆ ಮಾಡಿದ್ದರು.
ರೇವಂತ್ ತನ್ನ ಸ್ನೇಹಿತ ಸ್ಟಾಲಿನ್ ಮೇಲೆ ನಡೆದಿದ್ದ ಹಲ್ಲೆ ಪ್ರಕರಣದಲ್ಲಿ ದೂರು ದಾಖಲಿಸಲು ಸಹಕರಿಸಿದ್ದ. ಇದರಿಂದ ಕೋಪಗೊಂಡ ರೌಡಿಶೀಟರ್ ಗ್ಯಾಂಗ್, ರಾಜಿ ಮಾತುಕತೆ ನೆಪದಲ್ಲಿ ಕರೆಸಿ ಚಿಕ್ಕಪ್ಪನ ಎದುರೇ ರೇವಂತ್ ಅನ್ನು ಹತ್ಯೆ ಮಾಡಿತ್ತು ಎಂದು ಆರೋಪಿಸಲಾಗಿದೆ.
ಪ್ರಕರಣವನ್ನು ತಮಿಳುನಾಡು ಪೊಲೀಸರು ವರ್ಗಾವಣೆ ಮಾಡಿದ ಬಳಿಕ ತನಿಖೆ ನಡೆಸಿದ ವರ್ತೂರು ಪೊಲೀಸರು 90 ದಿನಗಳೊಳಗೆ ಚಾರ್ಜ್‌ಶೀಟ್ ಸಲ್ಲಿಸಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಪರಿಣಾಮವಾಗಿ ಜೈಲಿನಲ್ಲಿದ್ದ ಏಳು ಆರೋಪಿಗಳು ಸುಲಭವಾಗಿ ಜಾಮೀನು ಪಡೆದು ಹೊರಬಂದಿದ್ದಾರೆ.
ಜಾಮೀನಿನ ಷರತ್ತಿನಂತೆ ರೇವಾ ಪ್ರತಿದಿನ ಠಾಣೆಗೆ ಹಾಜರಾಗಿ ಸಹಿ ಹಾಕಬೇಕಿತ್ತು. ಆದರೆ, ಇನ್ಸ್‌ಪೆಕ್ಟರ್ ಪ್ರಭಾವದಿಂದ ಪೊಲೀಸರೇ ಅಪಾರ್ಟ್‌ಮೆಂಟ್‌ಗೆ ತೆರಳಿ ಸಹಿ ಪಡೆಯುತ್ತಿದ್ದಾರೆ ಎಂಬ ಆರೋಪ ಸಂತ್ರಸ್ತ ಕುಟುಂಬ ಮಾಡಿದೆ. ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆಗೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.



