ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ: ಚಿಕ್ಕ ಮಕ್ಕಳ ದೈಹಿಕ, ಮಾನಸಿಕ ಆರೋಗ್ಯಕ್ಕೆ ಪೌಷ್ಟಿಕಾಂಶಗಳುಳ್ಳ ಆಹಾರ ಅವಶ್ಯ. ಈ ನಿಟ್ಟಿನಲ್ಲಿ ತಾಯಂದಿರು ಮತ್ತು ಅಂಗನವಾಡಿ ಶಿಕ್ಷಕಿಯರ ಪಾತ್ರ ಮಹತ್ವದ್ದಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಭರತಯೋಗೇಶ ಕರಗುದರಿ ಹೇಳಿದರು.
ಅವರು ಸೋಮವಾರ ಪಟ್ಟಣದ ಅಂಗನವಾಡಿಯಲ್ಲಿ ತಾಲ್ಲೂಕಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಆಶ್ರಯದಲ್ಲಿ ರಾಷ್ಟ್ರೀಯ ಪೌಷ್ಟಿಕಾಂಶ ಮಾಸಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳಿಂದ ಹಿರಿಯರವರೆಗೆ ಎಲ್ಲರಿಗೂ ಪೌಷ್ಟಿಕ ಆಹಾರ ಎಂಬುದು ಈ ಬಾರಿಯ ಪೋಷಣ್ ಅಭಿಯಾನದ ಘೋಷವಾಕ್ಯವಾಗಿದ್ದು, ಮಕ್ಕಳೊಂದಿಗೆ ಹಿರಿಯರು ಸಮಾಜದ ಆಸ್ತಿ. ಅವರಿಗೂ ಪೌಷ್ಟಿಕ ಆಹಾರ ದೊರೆಯಲಿ. ಮುಖ್ಯವಾಗಿ ದೇಸಿ ಆಹಾರ ಮತ್ತು ಪೌಷ್ಟಿಕ ಆಹಾರವನ್ನು ಎಲ್ಲರೂ ಸೇವಿಸುವಂತಾಗಲಿ ಎಂದರು.
ಕಿರಿಯ ದಿವಾಣಿ ನ್ಯಾಯಾಧೀಶರಾದ ಸತೀಶ ಎಂ ಮಾತನಾಡಿ, ನಮಗೆ ಪ್ರಾದೇಶಿಕವಾಗಿ ಸಿಗುವ ಸಾಂಪ್ರದಾಯಿಕ ಆಹಾರ ಸಂಪತ್ತನ್ನು ಉಳಿಸಿ, ಬೆಳೆಸಿ ಮತ್ತು ಬಳಸಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು ಎಂದರು.
ಶಿಶು ಅಭಿವೃದ್ಧಿ ಅಧಿಕಾರಿ ಮೃತ್ಯುಂಜಯ ಗುಡ್ಡದಾನ್ವೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲರಾದ ಬಿ.ಎಸ್. ಬಾಳೇಶ್ವರಮಠ, ವಿ.ಎಸ್. ಪಶುಪತಿಹಾಳ, ಪಿ.ಎಂ. ವಾಲಿ ಮಹಿಳೆಯರಿಗೆ ಕಾನೂನಿನ ಕುರಿತು ಅರಿವು ಮೂಡಿಸಿದರು.
ಶಿರಹಟ್ಟಿ, ಲಕ್ಷೇಶ್ವರ ಭಾಗದ ಅಂಗನವಾಡಿ ಮೇಲ್ವಿಚಾರಕರು, ಕಾರ್ಯಕರ್ತೆಯರು, ಸಹಾಯಕಿಯರು ಮತ್ತು ಲಕ್ಷೇಶ್ವರ ಭಾಗದ ಅಂಗನವಾಡಿ ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.



