ವಿಜಯಸಾಕ್ಷಿ ಸುದ್ದಿ, ಗದಗ: ಸದುದ್ದೇಶದ ದೂರ ದೃಷ್ಟಿ, ಶಿಕ್ಷಕರ ತೀಕ್ಷ್ಣ ಹಾಗೂ ಸದ್ಬೋದಕ ದೃಷ್ಟಿಗಳು ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗಳನ್ನು ನಿರ್ಧರಿಸಬಲ್ಲವು ಎಂದು ಡಾ. ಗುರುಲಿಂಗಪ್ಪ ಬಿಡಿನಹಾಳ ಅಭಿಪ್ರಾಯಪಟ್ಟರು.
ನಗರದ ಸನ್ಮಾರ್ಗ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ವಿದ್ಯಾಲಯದ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ‘ಸನ್ಮತಿ’ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮನ್ನು ಭೂಮಿಗೆ ತಂದ ತಂದೆ–ತಾಯಿಗಳನ್ನು, ಜ್ಞಾನ ದಾಹವನ್ನು ತಣಿಸುವ ಶಿಕ್ಷಕರನ್ನು ಗೌರವ ಭಾವದಿಂದ ಕಂಡಾಗ ಸಂಸ್ಕಾರದ ಪ್ರಭೆ ನಿಮ್ಮನ್ನು ಆವರಿಸಿ, ಸಂಸ್ಕೃತಿ ಹಾಗೂ ಸನ್ಮತಿ ದೊರಕಿ, ಸಾಧನೆ ಎನ್ನುವದು ಸುಲಭ ಸಾಧ್ಯವಾಗುತ್ತದೆ. ಹಾಗೆಯೇ ಜ್ಞಾನದ ಜೊತೆ ಸಚ್ಚಾರಿತ್ರ್ಯವಿರಲಿ. ಅಹಂಕಾರ ಬೇಡ ಎಂದರು.
ಡಾ. ವಸುಧೇಂದ್ರ ಆಚಾರ್ಯರು ಮಾತನಾಡಿ, ವಿದ್ಯಾರ್ಥಿ ಜೀವನದ ಯಶಸ್ಸಿಗೆ ಕಾರಣೀಭೂತರಾಗುವವರು ಶಿಕ್ಷಕ, ಪಾಲಕ ಹಾಗೂ ಆತ್ಮ ವಿಶ್ವಾಸ, ಶ್ರದ್ಧೆಗಳು. ವಿದ್ಯಾರ್ಥಿಗಳು ಸತತ ಪರಿಶ್ರಮ, ಸಮಯ ಪ್ರಜ್ಞೆ, ಸಾಧನೆಯ ಛಲ ಮೈಗೂಡಿಸಿಕೊಂಡರೆ ಸಾಧನೆಯ ಶಿಖರ ತಲುಪಲು ಸಾಧ್ಯ ಎಂದರು.
ಸಂಸ್ಥೆಯ ಚೇರಮನ್ ಪ್ರೊ. ರಾಜೇಶ ಕುಲಕರ್ಣಿ, ಅಧ್ಯಕ್ಷತೆ ವಹಿಸಿದ್ದ ಪ್ರೋ. ರೋಹಿತ್ ಒಡೆಯರ್, ಪ್ರಾಚಾರ್ಯಾ ಪ್ರೊ. ಪ್ರೇಮಾನಂದ ರೋಣದ ಮಾತನಾಡಿದರು. ಶ್ರೀಶಾ ಶೆಟ್ಟಿ ಪ್ರಾರ್ಥಿಸಿದರೆ, ಮುರಲೀಧರ ಸಂಕನೂರ ಸ್ವಾಗತಿಸಿ ಪರಿಚಯಿಸಿದರು. ಪ್ರೊ. ಹೇಮಂತ ದಳವಾಯಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ರಾಹುಲ್ ಒಡೆಯರ್ ವಂದಿಸಿದರು.
ಸಂಸ್ಥೆಯ ಆಡಳಿತಾಧಿಕಾರಿ ಎಂ.ಸಿ. ಹಿರೇಮಠ, ನಿರ್ದೇಶಕ ಪ್ರೊ. ರಾಹುಲ್ ಒಡೆಯರ, ಪ್ರೊ. ಪುನೀತ ದೇಶಪಾಂಡೆ, ಪ್ರೊ. ಸೈಯ್ಯದ್ ಮತಿನ್ ಮುಲ್ಲಾ, ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.