ವಿಜಯಸಾಕ್ಷಿ ಸುದ್ದಿ, ಗದಗ: ಕುವೆಂಪು ಅವರು ಹೇಳುವಂತೆ ಕನ್ನಡವೆನ್ನುವುದು ಮನೆಯ ಬಾಗಿಲಾದರೆ, ಇತರ ಭಾಷೆಗಳು ಮನೆಯ ಕಿಡಕಿಗಳಂತಿರಲಿ. ಎಲ್ಲ ದಿಕ್ಕಿನಿಂದಲೂ ಜ್ಞಾನದ ಬೆಳಕು ಹರಿದು ಬಂದಾಗ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ಪ್ರತಿಯೊಬ್ಬರು ಆಡುವ ಭಾಷೆಗಳು ಭಿನ್ನವಾದರೂ ಆಲೋಚಿಸುವುದು ಮಾತೃಭಾಷೆಯಲ್ಲಿಯೇ ಎನ್ನುವುದು ವಿಶೇಷ. ಕನ್ನಡಿಗರಾಗಿರುವ ನಾವು ಪ್ರತಿಯೊಬ್ಬರೂ ಕನ್ನಡವನ್ನು ಹೆತ್ತ ತಾಯಿಯಂತೆ ಗೌರವಿಸಬೇಕು. ಇಂಗ್ಲೀಷ್ ಅನಿವಾರ್ಯವಾಗಿದ್ದರೂ ನಮ್ಮ ಪ್ರಥಮ ಆದ್ಯತೆ ಕನ್ನಡವಾಗಿರಲಿ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.
೨೭೧೯ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಮಾತನಾಡುವಾಗ, ವ್ಯವಹರಿಸುವಾಗ ವಿಶೇಷವಾಗಿ ಕನ್ನಡ ಭಾಷೆಯನ್ನು ಬಳಸಬೇಕು. ಕನ್ನಡದಲ್ಲಿ ಅಧ್ಯಯನ ಮಾಡುವದರಿಂದ ನಮ್ಮ ಬೌದ್ಧಿಕ ಶಕ್ತಿ ಹೆಚ್ಚಿ ವಿಕಾಸಗೊಳ್ಳಲು ಸಾಧ್ಯವಾಗುತ್ತದೆ. ಕನ್ನಡ ಭಾಷೆ ನಮ್ಮ ತಾಯಿ. ಪ್ರತಿಯೊಬ್ಬರೂ ಮಾತೃಭಾಷೆಯ ಬಗ್ಗೆ ಅಭಿಮಾನ ಮತ್ತು ಪ್ರೀತಿಯನ್ನು ಹೊಂದಬೇಕು. ಬಸವಾದಿ ಶಿವಶರಣರು, ದಾಸರು, ಪಂಪ, ರನ್ನ ರಾಘವಾಂಕ, ಚಾಮರಸನಂತಹ ಅನೇಕ ಶ್ರೇಷ್ಠ ಕವಿಗಳು ಕನ್ನಡ ಭಾಷೆಯನ್ನು ಸಮೃದ್ಧಗೊಳಿಸಿದ್ದಾರೆ. ಬಸವಾದಿ ಶಿವಶರಣರು ಕನ್ನಡದಲ್ಲಿ ವಚನಸಾಹಿತ್ಯವನ್ನು ರಚಿಸಿ ಕನ್ನಡ ಭಾಷೆಯ ಸ್ಥಾನಮಾನವನ್ನು ಹೆಚ್ಚಿಸಿದ್ದಾರೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಕೆ.ವಿ.ಎಸ್.ಆರ್. ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಬಿ.ಆರ್. ಜಾಲಿಹಾಳ ಮಾತನಾಡಿ, ಬೇರೆ ಭಾಷೆಗಳನ್ನು ಕಲಿಯುವುದರ ಜೊತೆಗೆ ನಮ್ಮ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಹೊಂದೋಣ. ನಮ್ಮ ಭಾಷೆಯನ್ನು ಮರೆಯಬಾರದು. ಜನರಿಗೆ ಬದುಕಿನ ಭಾಷೆ ಬೇಗ ಅರ್ಥವಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಲ್ಲಮಪ್ರಭು ಬೆಟ್ಟದೂರು ಇವರನ್ನು ಹಾಗೂ ಗದಗ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತ ಪುರಸ್ಕೃತರಾದ ಬಾಲಚಂದ್ರ ಭರಮಗೌಡ್ರ ಇವರುಗಳನ್ನು ಸಂಮಾನಿಸಲಾಯಿತು.
ಧರ್ಮಗ್ರಂಥ ಪಠಣವನ್ನು ವೈಭವ ಸಿ.ಗಾಣಿಗೇರ, ವಚನ ಚಿಂತನೆಯನ್ನು ಖುಷಿ ಏ. ಖಟವಟೆ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಎಸ್.ಆರ್. ನರೆಗಲ್ ಗದಗ ವಹಿಸಿಕೊಂಡಿದ್ದರು. ಗುರುಬಸವ ಸಿಬಿಎಎಸ್‌ಇ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ನಡೆಯಿತು. ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನಡೆಸಿಕೊಟ್ಟರು. ಮಂಜುಳಾ ಹಾಸಲಕರ ನಿರೂಪಿಸಿದರು. ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸಂಮಾನಿತರನ್ನು ಪರಿಚಯಿಸಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸದಸ್ಯರಾದ ಸೋಮಶೇಖರ ಪುರಾಣಿಕ, ವಿದ್ಯಾ ಗಂಜಿಹಾಳ, ಮಹೇಶ್ ಗಾಣಿಗೇರ, ನಾಗರಾಜ್ ಹಿರೇಮಠ, ಬಸವರಾಜ ಕಾಡಪ್ಪನವರ ಹಾಗೂ ಶಿವಾನಂದ ಹೊಂಬಳ ಉಪಸ್ಥಿತರಿದ್ದರು.