ಜಮ್ಮು–ಕಾಶ್ಮೀರ: ಜಮ್ಮು–ಕಾಶ್ಮೀರದ ಹಲವೆಡೆ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಂಡೇರ್ಬಲ್ ಜಿಲ್ಲೆಯ ಯಾತ್ರೆಯ ಬಾಲ್ಟಾಲ್ ಮಾರ್ಗದಲ್ಲಿ ಭೂಕುಸಿತ ಸಂಭವಿಸಿ ಮಹಿಳಾ ಯಾತ್ರಿಕರೊಬ್ಬರು ಸಾವನ್ನಪ್ಪಿ,
ಮೂವರು ಗಾಯಗೊಂಡ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಗುರುವಾರದಿಂದಲೇ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯ ಅಧಿಕಾರಿಯೊಬ್ಬರು ‘ಇಂದಿನ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.
ಇಂದು ಬೆಳಿಗ್ಗೆ ಜಮ್ಮುವಿನಿಂದ ಪವಿತ್ರ ಗುಹಾ ದೇವಾಲಯದ ಅವಳಿ ಮೂಲ ಶಿಬಿರಗಳ ಕಡೆಗೆ ಯಾವುದೇ ಹೊಸ ಯಾತ್ರಾರ್ಥಿಗಳಿಗೆ ತೆರಳಲು ಅವಕಾಶ ನೀಡಲಾಗಿಲ್ಲ’ ಎಂದು ತಿಳಿಸಿದ್ದಾರೆ. ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಮುಂದಿನ ದಿನಗಳಲ್ಲಿಯೂ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.