ವಿಜಯಸಾಕ್ಷಿ ಸುದ್ದಿ, ಗದಗ: ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ಪಂಚ ಕಮಿಟಿ, ತರುಣ ಸಂಘ, ಮಹಿಳಾ ಮಂಡಳ ಹಾಗೂ ಸಮಾಜ ಬಾಂಧವರ ಸಹಯೋಗದೊಂದಿಗೆ ಹುಡ್ಕೋ ಬಡಾವಣೆಯ ಅಮೃತ ಶಿಲೆಯ ಅಂಬಾಭವಾನಿ ದೇವಸ್ಥಾನದ ಕಳಸಾರೋಹಣ ಹಾಗೂ ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ಜ.31ರಿಂದ ಫೆ.3ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಎಸ್‌ಕೆ ಸಮಾಜ ಪಂಚ ಕಮಿಟಿ ಅಧ್ಯಕ್ಷ ಫಕೀರಸಾ ಭಾಂಡಗೆ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.31ರಂದು ಬೆಳಿಗ್ಗೆ 7ರಿಂದ 11ರವರೆಗೆ ಚಂಡಿ ಸಪ್ತಶತಿ ಸ್ವಾಹಾಕಾರದ ಅಂಗವಾಗಿ ಪುಣ್ಯಾಹವಾಚನ, ಮಾತೃಕಾ ಪೂಜನ, ನಾಂದಿಶ್ರಾದ್ಧ, ಬ್ರಾಹ್ಮಣ ಮಧುಪರ್ಕ ಪೂಜಾ, ಮುಖ್ಯ ದೇವತಾ ಸ್ಥಾಪನ ಹಾಗೂ ಸಪ್ತಶತಿ ಪಾರಾಯಣ, ನಂತರ ಕುಮಾರಿಕಾ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಫೆ.1ರಂದು ಬೆಳಗ್ಗೆ 7ರಿಂದ 11ರವರೆಗೆ ಚಂಡಿಕಾ ಹವನ ಹಾಗೂ ಪೂರ್ಣಾಹುತಿ, ಬೆಳಗ್ಗೆ 11ಕ್ಕೆ ಕಳಸದ ಮೆರವಣಿಗೆಯು 108 ಸುಹಾಸಿನಿಯರಿಂದ ಕುಂಭ ಮೇಳದೊಂದಿಗೆ ಹಳೇ ಸರಾಫ್ ಬಜಾರದಲ್ಲಿರುವ ಜಗದಂಬಾ ದೇವಸ್ಥಾನದಿಂದ ಹುಡ್ಕೋ ಬಡಾವಣೆ ಅಂಬಾಭವಾನಿ ದೇವಸ್ಥಾನದವರೆಗೆ ನಡೆಯುತ್ತದೆ. ಫೆ.2ರಂದು ಬೆಳಿಗ್ಗೆ 7ಕ್ಕೆ ಕಳಸಕ್ಕೆ ಜಲಾಧಿವಾಸ, ಧಾನ್ಯಾಧಿವಾಸ, ಹೋಮ-ಹವನ ಕಾರ್ಯಕ್ರಮ, ಸಾಯಂಕಾಲ 6ಕ್ಕೆ ಅಭಿನವ ಶಂಕರ ಭಾರತೀ ಮಹಾಸ್ವಾಮೀಜಿಗಳಿಂದ ಧೂಳ ಪೂಜೆ ಹಾಗೂ ಆಶೀರ್ವಚನ ಹಮ್ಮಿಕೊಳ್ಳಲಾಗಿದೆ ಎಂದರು.
ಫೆ.3ರಂದು ಬೆಳಿಗ್ಗೆ 6ಕ್ಕೆ ಅಂಬಾಭವಾನಿ ದೇವಿಗೆ ಅಭಿಷೇಕ ಹಾಗೂ ಕಳಸಕ್ಕೆ ಪೂಜೆ, ಅಲಂಕಾರ ಪೂಜೆ, ಹೋಮ-ಹವನ ಹಮ್ಮಿಕೊಳ್ಳಲಾಗಿದೆ. ಅಭಿನವ ಶಂಕರ ಭಾರತೀ ಸ್ವಾಮೀಜಿಗಳಿಂದ ಕಳಸಾರೋಹಣ ಹಾಗೂ ಪೂರ್ಣಹುತಿ, ಸಾಮೂಹಿಕ ಉಪನಯನ ನಂತರ ಮಹಾಪ್ರಸಾದ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಅಭಿನವ ಶಂಕರ ಭಾರತೀ ಸ್ವಾಮೀಜಿ ವಹಿಸುವರು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜು ಬದಿ, ವಿನೋದ ಶಿದ್ಲಿಂಗ, ರವಿ ಶಿದ್ಲಿಂಗ, ಶ್ರೀಕಾಂತಸಾ ಖಟವಟೆ, ಪ್ರಕಾಶ ಬಾಕಳೆ, ಎನ್.ಆರ್. ಖಟವಟೆ, ಪರಶುರಾಮಸಾ ಬದಿ, ಮಾರುತಿ ಪವಾರ, ವಿನೋದ ಭಾಂಡಗೆ, ಗಣಪತಸಾ ಜಿತೂರಿ ಇದ್ದರು.
ಅಧ್ಯಕ್ಷತೆಯನ್ನು ಎಸ್‌ಎಸ್‌ಕೆ ಸಮಾಜ ಪಂಚ ಕಮಿಟಿ ಅಧ್ಯಕ್ಷ ಫಕೀರಸಾ ಭಾಂಡಗೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಸಂಸದ ಬಸವರಾಜ ಬೊಮ್ಮಾಯಿ, ರಾಜ್ಯ ಸಭಾ ಸಂಸದ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕ ಡಿ.ಆರ್. ಪಾಟೀಲ, ಶಶಿಕುಮಾರ ಮೇರವಾಡೆ ಭಾಗವಹಿಸುವರು ಎಂದು ಫಕೀರಸಾ ಭಾಂಡಗೆ ತಿಳಿಸಿದರು.



